October 11, 2026
Sunday, October 11, 2026
spot_img

ನವರಾತ್ರಿ ಮೊದಲ ದಿನ ಶೈಲಪುತ್ರಿಯನ್ನೇ ಏಕೆ ಪೂಜಿಸಬೇಕು? ಇದರ ಹಿಂದಿನ ಪೌರಾಣಿಕ ಹಿನ್ನೆಲೆ ಏನು?

ನವರಾತ್ರಿಯ ಒಂಬತ್ತು ದಿನಗಳಲ್ಲಿ ಜಗನ್ಮಾತೆಯ ವಿವಿಧ ರೂಪಗಳನ್ನು ಭಕ್ತಿಯಿಂದ ಆರಾಧಿಸಲಾಗುತ್ತದೆ. ಈ ದಿವ್ಯ ಪಯಣದ ಮೊದಲ ಮೆಟ್ಟಿಲೇ ದೇವಿ ಶೈಲಪುತ್ರಿ. ಕಮಲದ ಹೂವು ಹಾಗೂ ತ್ರಿಶೂಲವನ್ನು ಕೈಯಲ್ಲಿ ಹಿಡಿದು, ವೃಷಭ ಮೇಲೆ ವಿರಾಜಮಾನಳಾಗಿರುವ ಈ ದೇವಿಯ ಸೃಷ್ಟಿಯ ಹಿಂದೆ ಅತ್ಯಂತ ರೋಚಕ ಮತ್ತು ಭಕ್ತಿಪೂರ್ವಕ ಪೌರಾಣಿಕ ಕಥೆಯಿದೆ.

ಶೈಲಪುತ್ರಿ ಹೇಗೆ ಸೃಷ್ಟಿಯಾದಳು?

ಶೈಲಪುತ್ರಿಯ ಸೃಷ್ಟಿಯ ಹಿನ್ನೆಲೆ ಪ್ರಜಾಪತಿ ದಕ್ಷಬ್ರಹ್ಮನ ಕಾಲದಿಂದ ಆರಂಭವಾಗುತ್ತದೆ. ದೇವಿಯ ಪೂರ್ವಜನ್ಮದ ಹೆಸರು ಸತಿ. ಈಕೆ ಶಿವನ ಧರ್ಮಪತ್ನಿಯಾಗಿದ್ದಳು. ಒಮ್ಮೆ ದಕ್ಷಬ್ರಹ್ಮನು ಬೃಹತ್ ಯಜ್ಞವನ್ನು ಏರ್ಪಡಿಸಿ, ಎಲ್ಲ ದೇವತೆಗಳನ್ನೂ ಆಹ್ವಾನಿಸಿದನು. ಆದರೆ ತನ್ನ ಅಳಿಯನಾದ ಮಹಾದೇವನನ್ನು ಅಪಮಾನಿಸುವ ಉದ್ದೇಶದಿಂದ ಆತನಿಗೆ ಆಹ್ವಾನ ಕಳುಹಿಸಲಿಲ್ಲ. ತಂದೆಯ ಮನೆಗೆ ಹೋಗಲು ಶಿವನ ಅಸಮ್ಮತಿಯಿದ್ದರೂ, ಸತಿಯು ಯಜ್ಞಕ್ಕೆ ತೆರಳಿದಳು. ಅಲ್ಲಿ ತನ್ನ ಪತಿ ಶಿವನಿಗೆ ಆದ ಘೋರ ಅಪಮಾನವನ್ನು ತಡೆಯಲಾರದೆ, ಯಜ್ಞಕುಂಡದ ಬೆಂಕಿಗೇ ಹಾರಿ ಆತ್ಮಾಹುತಿ ಮಾಡಿಕೊಂಡಳು.

ಈ ತ್ಯಾಗದ ನಂತರ, ಸತಿಯು ಪರ್ವತರಾಜನಾದ ಹಿಮವಂತ ಮತ್ತು ಮೇನಾದೇವಿಯ ಮಗಳಾಗಿ ಪುನರ್ಜನ್ಮ ತಳೆದಳು. ಪರ್ವತ (ಶೈಲ) ಎಂದರೆ ಹಿಮಾಲಯ, ಆತನ ಮಗಳು (ಪುತ್ರಿ) ಎಂದರ್ಥ. ಹೀಗಾಗಿ ಈ ದೇವಿಗೆ “ಶೈಲಪುತ್ರಿ” ಎಂಬ ಹೆಸರು ಬಂದಿತು. ಪ್ರಕೃತಿ ಮತ್ತು ಪುರುಷರ ಮಿಲನಕ್ಕೆ ತಪಸ್ಸನ್ನಾಚರಿಸಿ, ಮರಳಿ ಶಿವನನ್ನೇ ಪತಿಯಾಗಿ ಪಡೆದ ಆದಿಶಕ್ತಿಯೇ ಈ ಶೈಲಪುತ್ರಿ.

ನವರಾತ್ರಿಯ ಮೊದಲ ದಿನ ಈ ದೇವಿಗೆ ಏಕೆ ಪೂಜೆ?

ಮೂಲ ಶಕ್ತಿಯು ಭೂಮಿಗೆ ದೇವಿಯಾಗಿ ಅವತರಿಸಿದ ಮೊದಲ ರೂಪವೇ ಶೈಲಪುತ್ರಿ. ಆದ್ದರಿಂದ ನವದುರ್ಗೆಯರ ಪೂಜೆಯಲ್ಲಿ ಈಕೆಗೆ ಮೊದಲ ಸ್ಥಾನ.

ಪರ್ವತವು ಅಚಲ ಹಾಗೂ ಸ್ಥಿರತೆಗೆ ಸಂಕೇತ. ನವರಾತ್ರಿಯ ವ್ರತ ಮಾಡುವ ಭಕ್ತರಿಗೆ ಮನಸ್ಸಿನ ಸ್ಥಿರತೆ, ದೃಢ ಸಂಕಲ್ಪ ಮತ್ತು ಶಕ್ತಿ ನೀಡಲು ಮೊದಲ ದಿನ ಶೈಲಪುತ್ರಿಯನ್ನು ಆರಾಧಿಸಲಾಗುತ್ತದೆ.

ಯೋಗ ಮತ್ತು ಸಾಧನೆಯ ದೃಷ್ಟಿಯಿಂದ, ದೇವಿ ಶೈಲಪುತ್ರಿಯು ದೇಹದ ಮೊದಲ ಚಕ್ರವಾದ ‘ಮೂಲಾಧಾರ ಚಕ್ರ’ದ ಅಧಿಷ್ಠಾನ ದೇವತೆಯಾಗಿದ್ದಾಳೆ.

ಶೈಲಪುತ್ರಿಯ ಕಥೆಯು ನಮಗೆ ನಿರಂತರ ಪ್ರಯತ್ನ ಮತ್ತು ತ್ಯಾಗದ ಮಹತ್ವವನ್ನು ತಿಳಿಸಿಕೊಡುತ್ತದೆ. ಅಪಮಾನ ಮತ್ತು ಸವಾಲು ಎದುರಾದಾಗ ಕುಗ್ಗಿಹೋಗದೆ, ಹೊಸ ರೂಪದಲ್ಲಿ ಎದ್ದುನಿಂತು ಗುರಿಯನ್ನು ತಲುಪುವ ದೃಢಸಂಕಲ್ಪವನ್ನು ಈ ಮಾತೆ ನಮಗೆ ನೀಡುತ್ತಾಳೆ.

Must Read