October 11, 2026
Sunday, October 11, 2026
spot_img

ದುರ್ಗಾಮಾತಾ ದೌಡ ದೇವಿ ಮೆರವಣಿಗೆಯಲ್ಲಿ ಭೀಕರ ಅಪಘಾತ: ಮೂವರು ಸಾ*ವು, 10ಕ್ಕೂ ಹೆಚ್ಚು ಮಂದಿಗೆ ಗಾಯ

ಹೊಸದಿಗಂತ ವರದಿ ಬೆಳಗಾವಿ:

ದುರ್ಗಾಮಾತಾ ದೌಡ ದೇವಿ ಮೂರ್ತಿಯ ಮೆರವಣಿಗೆ ವೇಳೆ ಹಿಂಬದಿಯಿಂದ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಣಗುತ್ತಿ ಹಾಗೂ ಹತ್ತರಗಿ ಟೋಲ್‌ಗೇಟ್ ಸಮೀಪ ಭಾನುವಾರ ಸಂಭವಿಸಿದೆ.

ಹುಂಚ್ಯಾನಟ್ಟಿ ಗ್ರಾಮದಿಂದ ಬೆಳಗಾವಿಗೆ ತರಲಾಗಿದ್ದ ದುರ್ಗಾಮಾತಾ ದೌಡ ದೇವಿ ಮೂರ್ತಿಯನ್ನು ಮತ್ತೆ ಗ್ರಾಮಕ್ಕೆ ಮೆರವಣಿಗೆ ಮೂಲಕ ಕೊಂಡೊಯ್ಯುತ್ತಿದ್ದಾಗ, ವೇಗವಾಗಿ ಬಂದ ಟ್ರಕ್ ಮೆರವಣಿಗೆಯಲ್ಲಿದ್ದವರ ಮೇಲೆ ಹರಿದಿದೆ. ಅಪಘಾತದ ತೀವ್ರತೆಗೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ಪ್ರಕಾಶ, ಮಹೇಶ್ ಹಾಗೂ ದಾನೇಶ್ವರಿ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಬೆಳಗಾವಿ ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಪೈಕಿ ಏಳು ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಗಾಯಾಳುಗಳ ಸಂಪೂರ್ಣ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ.

Must Read