October 11, 2026
Sunday, October 11, 2026
spot_img

ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ: ಅಂಕೋಲಾದಲ್ಲಿ 48 ವರ್ಷದ ವ್ಯಕ್ತಿಯ ಬಂಧನ

ಹೊಸದಿಗಂತ ವರದಿ ಅಂಕೋಲಾ:

ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ ಆರೋಪದ ಮೇಲೆ ಅಂಕೋಲಾ ಪೊಲೀಸರು ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ. ಬಂಧಿತನನ್ನು ಶಿರಗುಂಜಿ ಬಲಿಗದ್ದೆ ನಿವಾಸಿ ಯಂಕು ಗೌಡ (48) ಎಂದು ಗುರುತಿಸಲಾಗಿದೆ.

ತಾಲೂಕಿನ ಬೊಬ್ರವಾಡ ವ್ಯಾಪ್ತಿಯ ನದಿಬಾಗ ಕಡಲತೀರದಲ್ಲಿ ವ್ಯಕ್ತಿಯೊಬ್ಬರು ಮಾದಕ ವಸ್ತು ಸೇವಿಸಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು. ಈ ವೇಳೆ ಯಂಕು ಗೌಡ ಅವರ ಬಾಯಿಂದ ಘಾಟು ವಾಸನೆ ಬರುತ್ತಿದ್ದುದನ್ನು ಗಮನಿಸಿದ ಪೊಲೀಸರು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಅವರು ಗಾಂಜಾ ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬಳಿಕ ಆರೋಪಿಯನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ವೈದ್ಯಾಧಿಕಾರಿಗಳು ನೀಡಿದ ಪರೀಕ್ಷಾ ವರದಿಯಲ್ಲಿ ಅವರು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಪೊಲೀಸ್ ಉಪನಿರೀಕ್ಷಕ ಗುರುನಾಥ ಹಾದಿಮನಿ ಅವರು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

Must Read