ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಇಂದು ಕೂಡ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇಂದು ಬೆಳಗ್ಗೆಯಿಂದಲೇ ದೆಹಲಿಯಲ್ಲಿ ಗುಡುಗು ಸಹಿತ ಮಳೆ ಸುರಿಯುತ್ತಿದ್ದು, ರಾಷ್ಟ್ರೀಯ ರಾಜಧಾನಿ ಪ್ರದೇಶದ ಹಲವು ಭಾಗಗಳಲ್ಲಿ ರಸ್ತೆಗಳು ಜಲಾವೃತವಾಗಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ.
ಬೆಳಗ್ಗೆ ಕಚೇರಿಗಳಿಗೆ, ಶಾಲಾ ಕಾಲೇಜುಗಳಿಗೆ ತೆರಳುವವರಿಗೆ ಸಮಯಕ್ಕೆ ಸರಿಯಾಗಿ ತೆರಳಲು ಸಾಧ್ಯವಾಗಿಲ್ಲ. ಇನ್ನು ದೆಹಲಿಯಲ್ಲಿ ವಿಪಕ್ಷಗಳ ಪ್ರತಿಭಟನೆ ನಡೆಯುತ್ತಿದ್ದು, ಆರು ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ಇದರಿಂದಾಗಿಯೂ ಹೆಚ್ಚು ವಾಹನಗಳು ರಸ್ತೆಗೆ ಇಳಿದಿವೆ.
ದೆಹಲಿಯಲ್ಲಿ ಇಂದು ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಗಂಟೆಗೆ 15 ಮಿ.ಮೀಗಿಂತ ಅಧಿಕ ಮಳೆ ಬೀಳುವ ಸಾಧ್ಯತೆ ಇದೆ ಇದರ ಜೊತೆಗೆ ಬಿರುಗಾಳಿಯೂ ಬೀಸಲಿದೆ. ಸಂಜೆಗೆ ಮಳೆಯ ತೀವ್ರತೆ ಹೆಚ್ಚಾಗಲಿದ್ದು, ಸಾರ್ವಜನಿಕರು ಆದಷ್ಟು ಬೇಗ ಮನೆಗೆ ಸೇರಿಕೊಳ್ಳುವುದು ಉತ್ತಮ.
ಯಾವುದೇ ಮರದ ಕೆಳಗೆ ಆಶ್ರಯ ಪಡೆಯಬೇಡಿ, ದುರ್ಬಲ ಕಟ್ಟಡಗಳ ಬಳಿ ನಿಲ್ಲಬೇಡಿ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.



