October 12, 2026
Monday, October 12, 2026
spot_img

‘ಪ್ರೇಮದ ಊರಲಿ’ ಭರ್ಜರಿ ಸಕ್ಸಸ್: ನಟಿ ತೇಜಸ್ವಿನಿ ಪೂಣಚ್ಚಗೆ ರಶ್ಮಿಕಾ ಮಂದಣ್ಣ ವಿಶೇಷ ಪ್ರಶಂಸೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿಸುತ್ತಿರುವ ‘ಪ್ರೇಮದ ಊರಲಿ’ ಸಿನಿಮಾ ಪ್ರಸ್ತುತ ರಾಜ್ಯಾದ್ಯಂತ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಕೇವಲ ಕರ್ನಾಟಕ ಮಾತ್ರವಲ್ಲದೆ ನೆರೆ ರಾಜ್ಯಗಳಲ್ಲೂ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ಯಶಸ್ಸಿನ ಖುಷಿಯ ನಡುವೆ, ಚಿತ್ರದ ನಾಯಕಿ ತಪಸ್ವಿನಿ ಪೂಣಚ್ಚ ಅವರಿಗೆ ಪ್ಯಾನ್ ಇಂಡಿಯಾ ಸ್ಟಾರ್ ರಶ್ಮಿಕಾ ಮಂದಣ್ಣ ಕಡೆಯಿಂದ ವಿಶೇಷ ಪ್ರಶಂಸೆ ಸಿಕ್ಕಿದೆ.

ರಶ್ಮಿಕಾ ಮಂದಣ್ಣ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಡಗಿನಿಂದ ಬಂದು ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಗೆಲುವು ಸಾಧಿಸುತ್ತಿರುವ ತಪಸ್ವಿನಿ ಪೂಣಚ್ಚ ಅವರನ್ನು ಕೊಂಡಾಡಿದ್ದಾರೆ. “ಕೊಡಗಿನಿಂದ ಬಂದ ಯುವತಿ ಇಷ್ಟು ದೊಡ್ಡ ಯಶಸ್ಸು ಗಳಿಸುವುದು ಸಾಮಾನ್ಯ ಮಾತಲ್ಲ. ನಿನ್ನ ಬಗ್ಗೆ ನನಗೆ ಅತಿಯಾದ ಹೆಮ್ಮೆಯಿದೆ” ಎಂದು ಬರೆದುಕೊಂಡಿರುವ ರಶ್ಮಿಕಾ, ಪ್ರೀತಿಯ ಅಪ್ಪುಗೆಯನ್ನೂ ಸೂಚಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕೇವಲ ಸ್ಟೋರಿ ಹಂಚಿಕೊಳ್ಳುವುದಕ್ಕೆ ರಶ್ಮಿಕಾ ಸೀಮಿತವಾಗಲಿಲ್ಲ. ಬದಲಿಗೆ, ನಟಿ ತಪಸ್ವಿನಿ ಪೂಣಚ್ಚ ಅವರಿಗೆ ನೇರವಾಗಿ ಫೋನ್ ಮಾಡಿ ಮಾತನಾಡಿಸಿ, ಹಾರ್ಟ್‌ಫುಲ್ ಆಗಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಈ ರೀತಿಯ ದೊಡ್ಡ ನಟಿಯೊಬ್ಬರ ಸರಳತೆ ಮತ್ತು ಪ್ರೋತ್ಸಾಹ ಹೊಸ ಪ್ರತಿಭೆಗಳಿಗೆ ದೊಡ್ಡ ಶಕ್ತಿ ತುಂಬುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ಈ ಸಂಪರ್ಕ ಸಾಧಿಸಲು ಖ್ಯಾತ ನಿರೂಪಕಿ ಅನುಶ್ರೀ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅನುಶ್ರೀ ಅವರ ಸಹಾಯದಿಂದಲೇ ರಶ್ಮಿಕಾ ಮಂದಣ್ಣ ತಪಸ್ವಿನಿ ಅವರನ್ನು ಸಂಪರ್ಕಿಸಲು ಸಾಧ್ಯವಾಯಿತಂತೆ. ಈ ನೆರವಿಗಾಗಿ ರಶ್ಮಿಕಾ ಅವರು ಅನುಶ್ರೀ ಅವರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ.

ಕೊನೆಯಲ್ಲಿ ತಪಸ್ವಿನಿ ಪೂಣಚ್ಚ ಅವರ ಮುಂದಿನ ಸಿನಿಮಾ ಪಯಣದ ಬಗ್ಗೆ ಮಾತನಾಡಿದ ರಶ್ಮಿಕಾ, “ಇದು ಕೇವಲ ನಿನ್ನ ಆರಂಭವಷ್ಟೇ. ನೀನು ಅಂದುಕೊಂಡಿದ್ದೆಲ್ಲ ಮತ್ತು ಕಂಡ ಕನಸುಗಳೆಲ್ಲವೂ ನನಸಾಗಲಿ” ಎಂದು ತುಂಬು ಹೃದಯದಿಂದ ಹಾರೈಸಿದ್ದಾರೆ. ಸ್ಟಾರ್ ನಟಿಯ ಈ ಬೆಂಬಲ ‘ಪ್ರೇಮದ ಊರಲಿ’ ತಂಡಕ್ಕೆ ಮತ್ತು ನಾಯಕಿಗೆ ಹೊಸ ಹುರುಪು ನೀಡಿದೆ.

Must Read