October 12, 2026
Monday, October 12, 2026
spot_img

ದಸರಾ ರಜೆಯಲ್ಲಿ ಪರೀಕ್ಷೆ : ಮಂಗಳೂರಿನಲ್ಲಿ ಕಾಲೇಜ್ ಗೇಟ್ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಂಗಳೂರಿನಲ್ಲಿ ದಸರಾ ಹಬ್ಬವನ್ನು ಅತ್ಯಂತ ವಿಜೃಂಭಣೆಯಾಗಿ ಆಚರಣೆ ಮಾಡಲಾಗುತ್ತದೆ. ಈ ಸಂಭ್ರಮದ ನಡುವೆಯೇ ಕಾಲೇಜು ಆಡಳಿತ ಮಂಡಳಿಯು ಪದವಿ ಸೆಮಿಸ್ಟರ್‌ ಪರೀಕ್ಷೆಗಳನ್ನು ನಿಗದಿಪಡಿಸಿರುವುದನ್ನು ವಿದ್ಯಾರ್ಥಿಗಳು ವಿರೋಧಿಸಿದ್ದಾರೆ. ಮಂಗಳೂರಿನ ಬೆಂದೂರ್‌ವೆಲ್‌ ಬಳಿ ಇರುವ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬಹಿಷ್ಕರಿಸಿ ಕಾಲೇಜು ಗೇಟಿನ ಎದುರು ಬೃಹತ್‌ ಪ್ರತಿಭಟನೆ ನಡೆಸಿದ್ದಾರೆ.

ಇಂದಿನಿಂದ ಅಕ್ಟೋಬರ್‌ 28 ರವರೆಗೆ ಪದವಿ ಪರೀಕ್ಷೆಗಳನ್ನು ಕಾಲೇಜಿನ ಆಡಳಿತ ಮಂಡಳಿ ನಿಗದಿ ಮಾಡಿದೆ. ಮಂಗಳೂರು ದಸರಾ ಕರಾವಳಿಯ ಪ್ರಮುಖ ಹಬ್ಬವಾಗಿದ್ದು, ಪ್ರತೀ ಮನೆಯಲ್ಲಿಯೂ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಈ ಸಮಯದಲ್ಲಿಯೇ ಪರೀಕ್ಷೆ ನಿಗದಿ ಮಾಡಿರುವ ಕಾರಣ ಮನೆಯಲ್ಲಿ ಹಬ್ಬಗಳನ್ನು ಆಚರಣೆ ಮಾಡಲು ಆಗುತ್ತಿಲ್ಲ. ಪರೀಕ್ಷೆಯ ಒತ್ತಡದಲ್ಲಿ ನಾವು ಹಬ್ಬಗಳ ಆಚರಣೆ ಮಾಡುವುದು ಅಸಾಧ್ಯವಾಗಿದೆ, ಯಾವ ಧಾರ್ಮಿಕ ಆಚರಣೆಯಲ್ಲಿಯೂ ಭಾಗಿಯಾಗಲು ಆಗುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ದಸರಾ ರಜೆಯನ್ನು ನೀಡಿ, ತದನಂತರ ಪರೀಕ್ಷೆ ಮಾಡಬೇಕು ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಪರೀಕ್ಷೆಯ ದಿನಾಂಕ ಪ್ರಕಟವಾಗುತ್ತಿದ್ದಂತೆಯೇ ವಿದ್ಯಾರ್ಥಿಗಳು ಎಕ್ಸಾಂ ಮುಂದೂಡುವಂತೆ ಆಡಳಿತ ಮಂಡಳಿಗೆ ಮನವಿ ಮಾಡಿದ್ದರು. ಆದರೆ ವಿದ್ಯಾರ್ಥಿಗಳ ಮನವಿಗೆ ಸ್ಪಂದನೆ ನೀಡದೇ ಅಂದುಕೊಂಡ ದಿನಾಂಕಕ್ಕೇ ಪರೀಕ್ಷೆ ನಿಗದಿ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ಗರಂ ಆಗಿದ್ದಾರೆ. ನಾವು ಪರೀಕ್ಷೆ ಬೇಡ ಎಂದು ಹೇಳುತ್ತಿಲ್ಲ, ಕೆಲ ದಿನಗಳು ಮುಂದೂಡಿ ಎಂದಷ್ಟೇ ಹೇಳುತ್ತಿದ್ದೇವೆ. ಈಗ ನಾವು ಪರೀಕ್ಷೆ ಬರೆಯುವುದಿಲ್ಲ ಎಂದು ಪಟ್ಟು ಹಿಡಿದು ಗೇಟಿನ ಬಳಿ ಕುಳಿತುಕೊಂಡಿದ್ದಾರೆ.
ಇದರ ಜೊತೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೂ ದೂರು ನೀಡಲಾಗಿದೆ.

ಸದ್ಯ ಕಾಲೇಜು ಗೇಟಿನ ಮುಂದೆ ಎಬಿವಿಪಿ ಜೊತೆ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದ್ದು, ಆಡಳಿತ ಮಂಡಳಿ ತಕ್ಷಣವೇ ತಮ್ಮ ನಿರ್ಧಾರವನ್ನು ಹಿಂಪಡೆದು ಹೊಸ ದಿನಾಂಕ ಪ್ರಕಟ ಮಾಡಬೇಕು ಎಂದು ಘೋಷಣೆ ಕೂಗಲಾಗುತ್ತಿದೆ.

Must Read