ಹೊಸದಿಗಂತ ವರದಿ ಯಾದಗಿರಿ:
ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದ ನೀಲಕಂಠೇಶ್ವರ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ, ಲಾಡ್ಜ್ ಮ್ಯಾನೇಜರ್ ಸೇರಿದಂತೆ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಹುಣಸಗಿ ವೃತ್ತದ ಸಿಪಿಐ ರವಿಕುಮಾರ ಎಸ್.ಎನ್. ಅವರಿಗೆ ಲಭಿಸಿದ ಮಾಹಿತಿ ಆಧರಿಸಿ, ಶೋಧನಾ ವಾರಂಟ್ ಪಡೆದು ಪಂಚರ ಸಮ್ಮುಖದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಕೊಠಡಿಯೊಂದರಲ್ಲಿ ಮಹಿಳೆ ಪತ್ತೆಯಾಗಿದ್ದು, ಓರ್ವ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ.
ದಾಳಿ ವೇಳೆ ಎರಡು ಕಾಂಡೋಮ್‌ಗಳು, 1,000 ನಗದು, ನೋಟ್‌ಬುಕ್ ಹಾಗೂ ಪೆನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಲಾಡ್ಜ್ ಮ್ಯಾನೇಜರ್ ದಯಾನಂದ ಪೂಜಾರಿ ಮತ್ತು ಇಬ್ರಾಹಿಮ್ ಮುಲ್ಲಾ ವಿರುದ್ಧ ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಭಾಗಣ್ಣ ತನಿಖೆ ಕೈಗೊಂಡಿದ್ದಾರೆ.



