ಹೊಸದಿಗಂತ ವರದಿ ಮಡಿಕೇರಿ:
ನಗರದ ನಾಲ್ಕು ಶಕ್ತಿ ದೇವತೆಗಳ ‘ಕರಗ’ಗಳಿಗೆ ಭಾನುವಾರ ಸಂಜೆ ಇಲ್ಲಿನ ಪಂಪಿನ ಕೆರೆ ಬಳಿ ಸಾಂಪ್ರದಾಯಿಕ ಪೂಜೆ ಸಲ್ಲಿಸುವುದರೊಂದಿಗೆ ಮಡಿಕೇರಿ ದಸರಾ ಜನೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರಕಿತು.

ಮಡಿಕೇರಿ ನಗರ ದಸರಾ ಸಮಿತಿ, ದಸರಾ ಉಪ ಸಮಿತಿಗಳು, ದಶಮಂಟಪ ಸಮಿತಿಯ ಪದಾಧಿಕಾರಿಗಳು, ಸಾರ್ವಜನಿಕ ಪ್ರಮುಖರು, ಜನಪ್ರತಿನಿಧಿಗಳು, ಅಧಿಕಾರಿಗಳು ನಾಲ್ಕು ಶಕ್ತಿ ದೇವತೆಗಳ ಕರಗಗಳಿಗೆ ಪೂಜೆ ಸಲ್ಲಿಸಿ, ನಾಡಿನ ಒಳಿತಿಗೆ ಪ್ರಾರ್ಥಿಸುವ ಮೂಲಕ ಕರಗ ಮೆರವಣಿಗೆ ಆರಂಭಗೊಡಿತು.
ನವರಾತ್ರಿ ಉತ್ಸವದ ಆರಂಭದ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ ನಾಲ್ಕು ಶಕ್ತಿದೇವತೆಗಳ ದೇವಸ್ಥಾನಗಳಿಂದ ವ್ರತಧಾರಿಗಳೊಂದಿಗೆ ದೇವಾಲಯ ಸಮಿತಿಯವರು ಮಂಗಳವಾದ್ಯ ಸಹಿತ ಕರಗ ನಿರ್ಮಾಣಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಹೊತ್ತು ಮೆರವಣಿಗೆಯ ಮೂಲಕ ಪಂಪಿನಕೆರೆಗೆ ತೆರಳಿದರು.
ಬಳಿಕ ಅಗತ್ಯ ಪೂಜಾ ವಿಧಿ-ವಿಧಾನಗಳೊಂದಿಗೆ ಅತ್ಯಾಕರ್ಷಕವಾಗಿ ಕರಗಗಳನ್ನು ಕಟ್ಟಿ ಹೂವುಗಳಿಂದ ಅಲಂಕರಿಸಿ ಸಂಜೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು.
ಇದನ್ನೂ ಓದಿ:
ಪಂಪಿನ ಕೆರೆ ಆವರಣದಿಂದ ಸಂಜೆ 6.45 ಗಂಟೆ ಸುಮಾರಿಗೆ ಹೊರ ಬಂದ ನಾಲ್ಕು ಕರಗಗಳ ಮೆರವಣಿಗೆಗೆ ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ದಸರಾ ಉತ್ಸವ ಸಮಿತಿಯ ಪದಾಧಿಕಾರಿಗಳು ಈಡುಗಾಯಿ ಒಡೆಯುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ನರೇಂದ್ರ ಸ್ವಾಮಿ, ಶಾಸಕ ಡಾ. ಮಂಥರ್ ಗೌಡ, ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ, ದಸರಾ ಸಮಿತಿಯ ಅರುಣ್ ಶೆಟ್ಟಿ, ಪ್ರಕಾಶ್ ಆಚಾರ್ಯ ದಶಮಂಟಪ ಸಮಿತಿ ಅಧ್ಯಕ್ಷ ಪಾಂಡಿರ ಪೂಣಚ್ಚ, ಜಿಲ್ಲಾಧಿಕಾರಿ ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾದ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಟಿ.ಪಿ.ರಮೇಶ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು ಕರಗಗಳಿಗೆ ಪ್ರಥಮ ಪೂಜೆ ಸಲ್ಲಿಸಿದರು.
ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆಯನ್ನು ಒಳಗೊಂಡ ನಗರದ ರಾಜಾಸೀಟು ಬಳಿಯ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ಕರಗವನ್ನು ವ್ರತಧಾರಿ ಪಿ.ಪಿ.ಚಾಮಿ ಹೊರುತ್ತಿದ್ದು, ದಂಡಿನ ಮಾರಿಯಮ್ಮ ಕರಗವನ್ನು ಜಿ.ಜೆ.ಜಿಜೇಶ್, ಕೋಟೆ ಮಾರಿಯಮ್ಮ ಕರಗವನ್ನು ಎಂ.ಎಸ್.ಪ್ರಜ್ವಲ್, ಕಂಚಿ ಕಾಮಾಕ್ಷಿಯಮ್ಮ ದೇಗುಲದ ಕರಗವನ್ನು ಜಿ.ಆರ್.ಗಿರೀಶ್ ಅವರು ಹೊರುವ ಮೂಲಕ ನಗರ ಮೆರವಣಿಗೆಯನ್ನು ಆರಂಭಿಸಿದರು.



