ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸುವ ವೇಳೆ ಭಾರೀ ಹೈಡ್ರಾಮಾ ನಡೆದಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬೆಳಗಾವಿಗೆ ಕರೆದೊಯ್ಯುತ್ತಿದ್ದ ವೇಳೆ ತುಮಕೂರಿನಲ್ಲಿ ಸಮಸ್ಯೆಯಾಗಿದ್ದು, ಮತ್ತೆ ವಾಪಾಸ್ ಬೆಂಗಳೂರಿಗೆ ಕರೆತರಲಾಗಿದೆ.
ತುಮಕೂರು ಮಾರ್ಗವಾಗಿ ಬೆಳಗಾವಿಗೆ ಕರೆದೊಯ್ಯುತ್ತಿದ್ದ ವೇಳೆ ಪೊಲೀಸರು ದಿಢೀರ್ ಯುಟರ್ನ್ ಮಾಡಿ ಬೆಂಗಳೂರಿಗೆ ಮರಳಿದ್ದಾರೆ. ಸಿಎಆರ್ ಎಸ್ಕಾರ್ಟ್ ಪೊಲೀಸರು ಬಿಗಿ ಭದ್ರತೆಯೊಂದಿಗೆ ಪ್ರಜ್ವಲ್ ರೇವಣ್ಣ ಅವರನ್ನು ಬೆಳಗಾವಿ ಹಿಂಡಲಗಾ ಜೈಲಿಗೆ ಕರೆದೊಯ್ಯುತ್ತಿದ್ದರು. ವಾಹನ ತುಮಕೂರು ತಲುಪುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಂದ ಬೆಂಗಾವಲು ಪಡೆಗೆ ತುರ್ತು ಕರೆ ಬಂದಿದೆ. ಮೇಲಧಿಕಾರಿಗಳ ಸೂಚನೆಯ ಮೇರೆಗೆ ಸಿಎಆರ್ ಸಿಬ್ಬಂದಿ ವಾಹನವನ್ನು ತಕ್ಷಣವೇ ತಿರುಗಿಸಿ, ರಾತ್ರಿಯೇ ಮತ್ತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕರೆತಂದಿದ್ದಾರೆ.
ಸದ್ಯ ಎರಡು ಪ್ರಕರಣಗಳ ಟ್ರಯಲ್ ನಡೆಯುತ್ತಿದ್ದು, ಜನಪತ್ರಿನಿಧಿಗಳ ವಿಶೇಷ ನ್ಯಾಯಲಯದಲ್ಲಿ ನಡೆಯುತ್ತಿರುವ ಟ್ರಯಲ್ ವೇಳೆ ಕೆಲ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಖುದ್ದು ಕೋರ್ಟ್‌ನಲ್ಲಿ ಹಾಜರಿರಬೇಕು. ಈ ಹಿನ್ನೆಲೆಯಲ್ಲಿ ಆತನನ್ನು ಸಿಎಆರ್ ಎಸ್ಕಾರ್ಟ್ ಸಿಬ್ಬಂದಿ ವಾಪಸ್ಸು ಪರಪ್ಪನ ಅಗ್ರಹಾರಕ್ಕೆ ಕರೆತಂದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.



