ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯಾಧಿಕಾರಿ ನೇಮಕಾತಿ ಹಗರಣದ ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಅಕ್ಟೋಬರ್ 15ರಿಂದ 20ರವರೆಗೆ ಜಾಮೀನು ನೀಡಿರುವ ನ್ಯಾಯಾಲಯ, ಅವರ ಮಗುವಿನ ನಾಮಕರಣ ಸಮಾರಂಭದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದೆ. ಆದರೆ, ಈ ಅವಧಿಯಲ್ಲಿ ಕೆಲವು ಕಟ್ಟುನಿಟ್ಟಿನ ಷರತ್ತುಗಳನ್ನು ಪಾಲಿಸುವಂತೆ ಆದೇಶಿಸಿದೆ.
ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠವು ಕನ್ನಾಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ಆರೋಪಿಯ ವಿರುದ್ಧ ತನಿಖಾ ಸಂಸ್ಥೆ ಗಂಭೀರ ಆಕ್ಷೇಪ ವ್ಯಕ್ತಪಡಿಸಿತ್ತು. ಮಧ್ಯಂತರ ಜಾಮೀನು ದೊರೆತರೆ ಆರೋಪಿ ತಲೆಮರೆಸಿಕೊಳ್ಳುವ ಸಾಧ್ಯತೆಯಿದೆ ಎಂಬ ಆತಂಕವನ್ನೂ ತನಿಖಾಧಿಕಾರಿಗಳು ನ್ಯಾಯಾಲಯದ ಮುಂದೆ ಪ್ರಸ್ತಾಪಿಸಿದ್ದರು.
ಪ್ರಯಾಣಕ್ಕೆ ಸರ್ಕಾರಿ ಬೆಂಗಾವಲು ಕಡ್ಡಾಯ
ತನಿಖಾ ಸಂಸ್ಥೆಯ ಆಕ್ಷೇಪಗಳನ್ನು ಪರಿಗಣಿಸಿದ ನ್ಯಾಯಪೀಠ, ಆರೋಪಿಯನ್ನು ಅವರ ಊರಿಗೆ ಕರೆದೊಯ್ದು ಮರಳಿ ಕರೆತರಲು ಸರ್ಕಾರವೇ ಬೆಂಗಾವಲು ವ್ಯವಸ್ಥೆ ಮಾಡಬಹುದಲ್ಲವೇ ಎಂದು ಪ್ರಶ್ನಿಸಿತು. ಅಂತಿಮವಾಗಿ, ಬೀದರ್‌ನಲ್ಲಿರುವ ಸ್ವಗ್ರಾಮಕ್ಕೆ ತೆರಳಿ ವಾಪಸ್ ಬರಲು ಸರ್ಕಾರದ ವತಿಯಿಂದ ಬೆಂಗಾವಲು ಒದಗಿಸುವಂತೆ ಸೂಚಿಸಿತು. ಮಧ್ಯಂತರ ಜಾಮೀನಿನ ಅವಧಿಯಲ್ಲಿ ಮೊಬೈಲ್ ಫೋನ್ ಬಳಸಬಾರದು ಎಂಬ ಷರತ್ತನ್ನೂ ವಿಧಿಸಿದೆ.
ಇದನ್ನೂ ಓದಿ:
ಕನ್ನಾಳೆ ಅವರ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ನಾಮಕರಣ ಸಮಾರಂಭದಲ್ಲಿ ಪಾಲ್ಗೊಳ್ಳಲು ಮಾನವೀಯ ನೆಲೆಯಲ್ಲಿ ಒಂದು ವಾರದ ಮಧ್ಯಂತರ ಜಾಮೀನು ನೀಡಬೇಕೆಂದು ಅವರ ಪರ ವಕೀಲರು ಈ ಹಿಂದೆ ಮನವಿ ಮಾಡಿದ್ದರು. ಅಗತ್ಯವಿದ್ದರೆ ಆರೋಪಿಯ ಮೇಲೆ ನಿಗಾ ಇರಿಸಬಹುದು, ಆದರೆ ಅಧಿಕಾರಿಗಳು ಜೊತೆಯಲ್ಲೇ ಪ್ರಯಾಣಿಸಬೇಕಾದ ಅಗತ್ಯವಿಲ್ಲ ಎಂಬ ವಾದವನ್ನೂ ಮಂಡಿಸಿದ್ದರು.
ಕೆಪಿಎಸ್‌ಸಿ ಹಗರಣದ ಆರೋಪ
ಬೀದರ್ ಮೂಲದ ಕನ್ನಾಳೆಯನ್ನು ಪಶುವೈದ್ಯಾಧಿಕಾರಿಗಳ ಅಕ್ರಮ ನೇಮಕಾತಿ ಮತ್ತು ಅಭ್ಯರ್ಥಿಗಳಿಂದ ಹಣ ವಸೂಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ದೆಹಲಿಯಲ್ಲಿ ವಶಕ್ಕೆ ಪಡೆದಿದ್ದರು. ವಿಚಾರಣಾ ನ್ಯಾಯಾಲಯವು ಈ ಹಿಂದೆ ಮಧ್ಯಂತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರಿಂದ ಅವರು ಹೈಕೋರ್ಟ್ ಮೊರೆ ಹೋಗಿದ್ದರು.



