ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಸಂಘರ್ಷ ಮತ್ತೆ ಸುಪ್ರೀಂ ಕೋರ್ಟ್ ಅಂಗಳ ತಲುಪಿದೆ. ಬಾಕಿ ಉಳಿದಿರುವ 11 ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಒತ್ತಾಯಿಸಿದರೆ, ಮಳೆ ಕೊರತೆ ಮತ್ತು ಬರದ ಪರಿಸ್ಥಿತಿಯಿಂದಾಗಿ ನೀರು ಬಿಡುವುದು ಕಷ್ಟ ಎಂದು ಕರ್ನಾಟಕ ಸ್ಪಷ್ಟಪಡಿಸಿದೆ. ಎರಡೂ ರಾಜ್ಯಗಳ ವಾದಗಳನ್ನು ಆಲಿಸಿರುವ ಸುಪ್ರೀಂ ಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಪರೇಶ್ ಕುಮಾರ್ ಸಿಂಗ್ ಅವರ ಪೀಠವು ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ, ತನ್ನ ಆದೇಶವನ್ನು ಕಾಯ್ದಿರಿಸಿದೆ. ಅಕ್ಟೋಬರ್ 7ರ ವೇಳೆಗೆ ಬಾಕಿ ಉಳಿದಿರುವ 11 ಟಿಎಂಸಿ ನೀರನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ಬಿಳಿಗುಂಡ್ಲುವಿನಲ್ಲಿ ಮುಂದಿನ 10 ದಿನಗಳ ಕಾಲ ಪ್ರತಿದಿನ 1.3 ಟಿಎಂಸಿ ನೀರು ಹರಿಸಬೇಕು ಎಂದು ತಮಿಳುನಾಡು ಮನವಿ ಮಾಡಿದೆ.
ಕರ್ನಾಟಕದ ವಾದ ಏನು?
ಕರ್ನಾಟಕದ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್, ಈ ವರ್ಷ ಮಳೆ ಕೊರತೆಯಿಂದ ರಾಜ್ಯವು ಸಂಕಷ್ಟ ಎದುರಿಸುತ್ತಿದೆ ಎಂದು ಹೇಳಿದರು. ನೀರಿನ ಸಂರಕ್ಷಣೆ ಮಾಡದಿದ್ದರೆ ನಗರ ಮತ್ತು ವಸತಿ ಪ್ರದೇಶಗಳ ಕುಡಿಯುವ ನೀರಿನ ಪೂರೈಕೆಗೆ ತೊಂದರೆಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು. ನವೆಂಬರ್‌ನಲ್ಲಿ ಈಶಾನ್ಯ ಮುಂಗಾರು ಮಳೆಯಿಂದ ತಮಿಳುನಾಡಿನ ಜಲಾಶಯಗಳಿಗೆ ನೀರು ಹರಿದುಬರುವ ಸಾಧ್ಯತೆಯಿದೆ ಎಂದೂ ವಾದಿಸಿದರು.
ಇದನ್ನೂ ಓದಿ:
ತಮಿಳುನಾಡು ಹೇಳಿದ್ದೇನು?
ಇದಕ್ಕೆ ಪ್ರತಿಯಾಗಿ ತಮಿಳುನಾಡಿನ ಪರ ವಕೀಲ ಮುಕುಲ್ ರೋಹಟಗಿ, ಸಂಕಷ್ಟದ ವರ್ಷದಲ್ಲಿಯೂ ರಾಜ್ಯಕ್ಕೆ ನ್ಯಾಯಸಮ್ಮತವಾಗಿ ದೊರೆಯಬೇಕಾದ ನೀರಿನ ಪಾಲನ್ನು ನೀಡಬೇಕು ಎಂದು ಒತ್ತಾಯಿಸಿದರು. ನೀರಿನ ಕೊರತೆಯಿಂದ ರೈತರ ಬೆಳೆಗಳಿಗೆ ಹಾನಿಯಾಗುತ್ತಿದ್ದು, ಮುಂದಿನ ವರ್ಷದವರೆಗೆ ಕಾಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯದ ಗಮನ ಸೆಳೆದರು.
ತಮಿಳುನಾಡಿನ ಪ್ರಕಾರ, ಕಾವೇರಿ ನೀರು ನಿರ್ವಹಣಾ ಸಮಿತಿಯು ಸೆಪ್ಟೆಂಬರ್ 24ರಂದು ಬಿಳಿಗುಂಡ್ಲುವಿನಲ್ಲಿ ನಿರೀಕ್ಷಿತ ನೀರಿನ ಹರಿವು 52.935 ಟಿಎಂಸಿ ಇರಬೇಕೆಂದು ಅಂದಾಜಿಸಿತ್ತು. ಆದರೆ, ನೀರಿನ ಕೊರತೆ ಮುಂದುವರಿದ ಹಿನ್ನೆಲೆಯಲ್ಲಿ ಹರಿವಿನ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ ಎಂದು ಅದು ಆಕ್ಷೇಪಿಸಿದೆ. ಸಂಕಷ್ಟದ ವರ್ಷಗಳಲ್ಲಿ ನೀರು ಹಂಚಿಕೆಗೆ ಸ್ಪಷ್ಟವಾದ ನಿಯಮಾವಳಿ ರೂಪಿಸದಿರುವುದನ್ನೂ ತಮಿಳುನಾಡು ಪ್ರಶ್ನಿಸಿದೆ.



