ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆ ನೀಡಿದೆ.
ಎಸ್‌ಸಿ ಮೀಸಲಾತಿಯನ್ನು ಶೇ.17ಕ್ಕೆ ಮತ್ತು ಎಸ್‌ಟಿ ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸುವ ಉದ್ದೇಶದಿಂದ ಜಾರಿಗೆ ತಂದಿದ್ದ ಕಾನೂನನ್ನು ನ್ಯಾಯಾಲಯ ರದ್ದುಗೊಳಿಸಿದೆ. ಈ ತೀರ್ಪು ರಾಜ್ಯದ ಮೀಸಲಾತಿ ವ್ಯವಸ್ಥೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ.
ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಮಹೇಂದ್ರ ಕುಮಾರ್ ಮಿತ್ರ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ಶಿಕ್ಷಣ ಸಂಸ್ಥೆಗಳ ಪ್ರವೇಶ ಮತ್ತು ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಹೆಚ್ಚಿಸಲು ರೂಪಿಸಿದ್ದ 2022ರ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಕಾಯ್ದೆಯನ್ನು ಅರ್ಜಿದಾರರು ಪ್ರಶ್ನಿಸಿದ್ದರು.
ಇದನ್ನೂ ಓದಿ:
ಶೇ.50ರಿಂದ ಶೇ.56ಕ್ಕೆ ಏರಿಕೆಯಾಗಿದ್ದ ಮೀಸಲಾತಿ
ಈ ಹಿಂದೆ ರಾಜ್ಯದಲ್ಲಿ ಎಸ್‌ಸಿಗಳಿಗೆ ಶೇ.15 ಮತ್ತು ಎಸ್‌ಟಿಗಳಿಗೆ ಶೇ.3ರಷ್ಟು ಮೀಸಲಾತಿ ಇತ್ತು. ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯು ಜನಸಂಖ್ಯೆಯ ಆಧಾರದಲ್ಲಿ ಎಸ್‌ಸಿ ಮೀಸಲಾತಿಯನ್ನು ಶೇ.17ಕ್ಕೆ ಹಾಗೂ ಎಸ್‌ಟಿ ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸುವಂತೆ ಶಿಫಾರಸು ಮಾಡಿತ್ತು. ಇದರಿಂದ ಎರಡೂ ಸಮುದಾಯಗಳ ಒಟ್ಟು ಮೀಸಲಾತಿ ಶೇ.18ರಿಂದ ಶೇ.24ಕ್ಕೆ ಏರಿಕೆಯಾಗಿತ್ತು. ಪರಿಣಾಮ, ರಾಜ್ಯದ ಒಟ್ಟು ಮೀಸಲಾತಿ ಪ್ರಮಾಣ ಶೇ.50ರಿಂದ ಶೇ.56ಕ್ಕೆ ತಲುಪಿತ್ತು.
ಸಮಿತಿಯ ಶಿಫಾರಸುಗಳಿಗೆ ರಾಜಕೀಯ ಪಕ್ಷಗಳ ಬೆಂಬಲವೂ ವ್ಯಕ್ತವಾಗಿತ್ತು. ಬಳಿಕ ಅಂದಿನ ಸರ್ಕಾರ ಮೀಸಲಾತಿ ಹೆಚ್ಚಳ ಜಾರಿಗೆ ಕ್ರಮ ಕೈಗೊಂಡಿತ್ತು. ಸಚಿವ ಸಂಪುಟದ ಅನುಮೋದನೆ, ಸುಗ್ರೀವಾಜ್ಞೆ ಹಾಗೂ ಅಧಿಕೃತ ಅಧಿಸೂಚನೆಯ ಮೂಲಕ ಹೊಸ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು.
ಆದರೆ, ಒಟ್ಟು ಮೀಸಲಾತಿ ಪ್ರಮಾಣವನ್ನು ಶೇ.50ರ ಮಿತಿಯಿಂದ ಶೇ.56ಕ್ಕೆ ಹೆಚ್ಚಿಸಿರುವುದರ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ಬಳಿಕ ನ್ಯಾಯಪೀಠವು ಮೀಸಲಾತಿ ಹೆಚ್ಚಳಕ್ಕೆ ಆಧಾರವಾಗಿದ್ದ ಕ್ರಮವನ್ನು ರದ್ದುಗೊಳಿಸಿದೆ.



