October 13, 2026
Tuesday, October 13, 2026
spot_img

ಬರಗಾಲ, ಕಬ್ಬು ಬೆಳೆಗಾರರ ಪ್ರತಿಭಟನೆ ಮಧ್ಯೆ ಸ್ಟಿಂಗ್‌ ಆಪರೇಷನ್‌ ವಿಚಾರ ಬೇಕಿತ್ತಾ? : ಎಚ್‌ಡಿಕೆ ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಸರಿಪಡಿಸೋಕೆ ಸಾವಿರ ಸಮಸ್ಯೆ ಇದೆ. ಬರಗಾಲ, ಕುಡಿಯುವ ನೀರಿಲ್ಲ, ರೈತರಿಗೆ ಹಣ ಇಲ್ಲ ಇಷ್ಟೊಂದೆಲ್ಲ ಕಷ್ಟವಿರುವಾಗ ಸ್ಟಿಂಗ್ ಆಪರೇಷನ್ ಮತ್ತು ಸಿಡಿ ಸಂಸ್ಕೃತಿ ವಿಚಾರಗಳು ಮುನ್ನೆಲೆಗೆ ಬಂದಿರುವುದು ಅತ್ಯಂತ ಕೆಟ್ಟ ಬೆಳವಣಿಗೆ ಎಂದು ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಡಿಕೆ ಶಿವಕುಮಾರ್‌ ವಿರುದ್ಧವೇ ಗೂಢಚಾರಿಕೆಯ ಗಂಭೀರ ಆರೋಪ ಮಾಡಿದ ಎಚ್‌ಡಿಕೆ, ನನಗೆ ಲಭ್ಯವಾಗಿರುವ ಖಚಿತ ಮಾಹಿತಿಯ ಪ್ರಕಾರ, ಸಿಎಂ ಆದ ನಂತರ ಸದಾಶಿವನಗರದ ಮನೆಯೊಂದರಲ್ಲಿ 4 ಮಂದಿ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಅತ್ಯಾಧುನಿಕ ಎಕ್ವಿಪ್‌ಮೆಂಟ್ ತರಿಸಿ ಸ್ವಂತ ಸಂಪುಟದ ಸಚಿವರ ಮೇಲೆಯೇ ಮಾಹಿತಿ ಸಂಗ್ರಹ ಹಾಗೂ ಫೋನ್ ಟ್ಯಾಪಿಂಗ್ ನಡೆಸಲಾಗುತ್ತಿದೆ.

ಸಚಿವರು, ವಿರೋಧ ಪಕ್ಷದವರು ಅಷ್ಟೇ ಅಲ್ಲದೆ ನನ್ನ ಸಿಬ್ಬಂದಿಯ ಫೋನ್‌ಗಳೂ ಟ್ಯಾಪ್ ಆಗುತ್ತಿವೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ನೋಡಿದರೆ ಯಾರ್ ಯಾರ ಮೇಲೆ ನಿಗಾ ಇಡಲಾಗಿತ್ತು ಎಂಬುದು ತಿಳಿಯುತ್ತದೆ. ಇಂತಹ ಟ್ರ್ಯಾಪ್ ಮಾಡಲು ಪ್ರತ್ಯೇಕ ತಂಡವೇ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. ಸ್ಟಿಂಗ್‌ ಆಪರೇಷನ್‌ ಎನ್ನುವ ಕೆಟ್ಟ ಸಂಸ್ಕೃತಿಯನ್ನು ಆರಂಭಿಸಿರುವ ಡಿಕೆಶಿ ಅವರೇ ಎಂದು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಮಾತನಾಡಿ, ಸಿದ್ದರಾಮಯ್ಯನವರೇ, ನಿಮ್ಮ ನೋವು ಏನೆಂದು ನನಗೆ ಅರ್ಥವಾಗುತ್ತದೆ. ನಿಮ್ಮನ್ನು ಯಾವ ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ ನೋಡಿ. ಆದರೆ ನೀವು ಹೆದರಿ ಸ್ಟೇ ತರಬಾರದು. ಸ್ಟೇ ತರುವುದು ರಕ್ಷಣೆಯಲ್ಲ. ನಿಮ್ಮ ಹಳೆಯ ಗಟ್ಟಿ ಧ್ವನಿ ಹೊರಬರಬೇಕು, ಹೋರಾಟ ಮಾಡಿ. 136 ಶಾಸಕರಿದ್ದಾರೆ, ಸರ್ಕಾರ ಹೇಗೆ ಬೀಳುತ್ತದೆ? ನೀವು ಟ್ರ್ಯಾಪ್ ಆಗಬೇಡಿ. ಈ ಸ್ಟಿಂಗ್ ಆಪರೇಷನ್ ದಂಧೆಗೆ ಸಂಪೂರ್ಣ ಇತಿಶ್ರೀ ಹಾಡಿ ಎಂದು ಸಲಹೆ ನೀಡಿದರು.

Must Read