ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವೊಮ್ಮೆ ನಮ್ಮ ಮನಸ್ಸಿನಲ್ಲಿ ಏಕೋ ನಿರಾಸಕ್ತಿ, ಹತಾಶೆ ಅಥವಾ ಕಾರಣವಿಲ್ಲದ ಸಿಟ್ಟು ಆವರಿಸಿಕೊಳ್ಳುತ್ತದೆ. “ನನಗೇನಾಗುತ್ತಿದೆ ಎಂಬುದು ನನಗೇ ತಿಳಿಯುತ್ತಿಲ್ಲ” ಎಂಬ ಗೊಂದಲ ಪ್ರತಿಯೊಬ್ಬರ ಜೀವನದಲ್ಲೂ ಒಮ್ಮೆಯಾದರೂ ಎದುರಾಗುತ್ತದೆ. ಸಣ್ಣಪುಟ್ಟ ಬೇಸರಗಳನ್ನು ನಾವು ನಿರ್ಲಕ್ಷಿಸುತ್ತೇವೆ. ಆದರೆ, ಈ ಭಾವನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೆ, ಅದು ನಿಮ್ಮ ಮಾನಸಿಕ ಆರೋಗ್ಯದ ಮೇಲಾಗುತ್ತಿರುವ ಪರಿಣಾಮದ ಮುನ್ಸೂಚನೆಯಾಗಿರಬಹುದು.
ದೇಹಕ್ಕೆ ಜ್ವರ ಅಥವಾ ಗಾಯವಾದರೆ ತಕ್ಷಣ ವೈದ್ಯರ ಬಳಿ ಹೋಗುವ ನಾವು, ಮನಸ್ಸಿಗೆ ನೋವಾದಾಗ ಮೌನವಾಗಿದ್ದುಬಿಡುತ್ತೇವೆ. ದೈಹಿಕ ಆರೋಗ್ಯಕ್ಕೆ ಕೊಡುವಷ್ಟೇ ಪ್ರಾಮುಖ್ಯತೆಯನ್ನು ಮಾನಸಿಕ ಆರೋಗ್ಯಕ್ಕೂ ನೀಡಬೇಕಾದುದು ಇಂದಿನ ತುರ್ತು ಅಗತ್ಯ. ಆತಂಕ, ಭೀತಿ, ಖಿನ್ನತೆ ಮತ್ತು ನಿದ್ರಾಹೀನತೆಯಂತಹ ಲಕ್ಷಣಗಳನ್ನು ಆರಂಭದಲ್ಲೇ ಗುರುತಿಸುವುದು, ದೊಡ್ಡ ಅನಾಹುತಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.
ನಮ್ಮ ಸಮಾಜದಲ್ಲಿ ಇಂದಿಗೂ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಲು ಜನರು ಹಿಂಜರಿಯುತ್ತಾರೆ. ‘ಇತರರು ಏನೆಂದುಕೊಳ್ಳುವರೋ’ ಎಂಬ ಭಯವೇ ಹಲವರನ್ನು ಮೌನಕ್ಕೆ ತಳ್ಳುತ್ತದೆ. ನೆನಪಿಡಿ, ಮಾನಸಿಕ ತೊಂದರೆ ಅನುಭವಿಸುವುದು ಯಾವುದೇ ತಪ್ಪಲ್ಲ. ನಿಮ್ಮ ನೆಚ್ಚಿನ ಸ್ನೇಹಿತರು, ಕುಟುಂಬದವರು ಅಥವಾ ನಂಬಿಕಸ್ಥರೊಂದಿಗೆ ನಿಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುವುದು ಮಾನಸಿಕ ಮುಕ್ತಿಗೆ ಮೊದಲ ಹೆಜ್ಜೆಯಾಗಿದೆ.
ನಿಮ್ಮ ಗೊಂದಲಗಳು ಅಥವಾ ಮನಸ್ಸಿನ ಅಸಮಾಧಾನಗಳು ನಿಯಂತ್ರಣಕ್ಕೆ ಸಿಗದಿದ್ದಾಗ ನುರಿತ ಕೌನ್ಸಿಲರ್‌ಗಳು ಅಥವಾ ಮಾನಸಿಕ ವೈದ್ಯರ ನೆರವು ಪಡೆಯಲು ಹಿಂಜರಿಯಬೇಡಿ. ಸರಿಯಾದ ಸಮಯದಲ್ಲಿ ಸಿಗುವ ಮಾರ್ಗದರ್ಶನ ಮತ್ತು ಚಿಕಿತ್ಸೆ ನಿಮ್ಮ ಜೀವನದ ದಿಕ್ಕನ್ನೇ ಬದಲಾಯಿಸಬಲ್ಲದು.
ಪ್ರತಿದಿನ ನಿಮಗಾಗಿ ಸ್ವಲ್ಪ ಸಮಯಸಮೀಸಲಾಗಿಡಿ. ಉತ್ತಮ ಆಹಾರ, ಪೌಷ್ಟಿಕ ನಿದ್ರೆ, ದಿನನಿತ್ಯದ ವ್ಯಾಯಾಮ ಹಾಗೂ ಪ್ರಾಣಾಯಾಮಗಳು ಮನಸ್ಸನ್ನು ಶಾಂತವಾಗಿಡಲು ನೆರವಾಗುತ್ತವೆ. ನಿಮ್ಮ ಭಾವನೆಗಳನ್ನು ಗೌರವಿಸಿ, ಅಗತ್ಯವಿದ್ದಾಗ ಸಹಾಯ ಕೇಳಲು ಹಿಂಜರಿಯದಿರಿ. ನೆನಪಿಡಿ, ನಿಮಗಾಗಿ ನೀವು ಕಳಜಿ ವಹಿಸುವುದು ಸ್ವಾರ್ಥವಲ್ಲ, ಅದು ಅಗತ್ಯ!



