ಹೊಸದಿಗಂತ ಡಿಜಿಟಲ್ ಡೆಸ್ಕ್:
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವವರಿಗೆ ತೆರಿಗೆ ಹೊರೆ ಕಡಿಮೆಯಾಗಬಹುದೇ ಎಂಬ ನಿರೀಕ್ಷೆ ಮೂಡಿದೆ.
ಹೌದು! ದೀರ್ಘಾವಧಿ ಬಂಡವಾಳ ಲಾಭ ತೆರಿಗೆ (LTCG) ಮತ್ತು ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (STT) ಕುರಿತು ಹೂಡಿಕೆದಾರರು ಸಲ್ಲಿಸುವ ಸಲಹೆಗಳನ್ನು ಆಲಿಸಲು ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಅವರ ಈ ಹೇಳಿಕೆ ಮುಂಬರುವ ಕೇಂದ್ರ ಬಜೆಟ್‌ನಲ್ಲಿ ತೆರಿಗೆ ನೀತಿಯಲ್ಲಿ ಬದಲಾವಣೆಗಳಾಗಬಹುದೇ ಎಂಬ ಚರ್ಚೆಗೆ ಮತ್ತಷ್ಟು ವೇಗ ನೀಡಿದೆ.
ಬ್ಲೂಮ್‌ಬರ್ಗ್ ನ್ಯೂ ಎಕಾನಮಿ ಫೋರಂ
ದೆಹಲಿಯಲ್ಲಿ ನಡೆದ ‘ಬ್ಲೂಮ್‌ಬರ್ಗ್ ನ್ಯೂ ಎಕಾನಮಿ ಫೋರಂ 2026’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶೀಯ ಮತ್ತು ವಿದೇಶಿ ಹೂಡಿಕೆದಾರರು ಷೇರು ಮಾರುಕಟ್ಟೆಯ ತೆರಿಗೆ ವ್ಯವಸ್ಥೆ ಕುರಿತು ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆ ಎಂದರು. ಎಲ್‌ಟಿಸಿಜಿ ತೆರಿಗೆಯನ್ನು ರದ್ದುಪಡಿಸಬೇಕು ಅಥವಾ ಅದರ ನಿಯಮಗಳಲ್ಲಿ ಬದಲಾವಣೆ ತರಬೇಕು ಎಂಬ ಬೇಡಿಕೆಗಳೂ ಚರ್ಚೆಯಲ್ಲಿವೆ. ವಿವಿಧ ಹೂಡಿಕೆಗಳ ಮೇಲಿನ ತೆರಿಗೆ ವ್ಯವಸ್ಥೆಯಲ್ಲಿ ಸಮಾನತೆ ಇರಬೇಕೇ ಎಂಬ ಚರ್ಚೆ ಆರೋಗ್ಯಕರವಾಗಿದ್ದು, ಬಜೆಟ್‌ಗೂ ಮುನ್ನ ಎಲ್ಲ ಅಭಿಪ್ರಾಯಗಳನ್ನು ಗಮನಿಸುವುದಾಗಿ ಅವರು ಹೇಳಿದರು.
ಈಗಲೇ ಭರವಸೆ ಕೊಡೋದು ಸೂಕ್ತವಲ್ಲ
ಆದರೆ, ಬಜೆಟ್ ಸಿದ್ಧತೆ ನಡೆಯುತ್ತಿರುವ ಈ ಹಂತದಲ್ಲಿ ತೆರಿಗೆ ಕಡಿತದ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸುವುದು ಅಥವಾ ಭರವಸೆ ನೀಡುವುದು ಸೂಕ್ತವಲ್ಲ ಎಂದು ಸಚಿವೆ ಸ್ಪಷ್ಟಪಡಿಸಿದರು. ಹೀಗಾಗಿ, ಹೂಡಿಕೆದಾರರು ನಿರೀಕ್ಷಿಸುತ್ತಿರುವ ತೆರಿಗೆ ವಿನಾಯಿತಿಯ ಕುರಿತು ಸರ್ಕಾರದ ಅಂತಿಮ ನಿಲುವು ಇನ್ನೂ ಸ್ಪಷ್ಟವಾಗಿಲ್ಲ.
ರೂಪಾಯಿ ಮೌಲ್ಯದ ಏರಿಳಿತದ ಬಗ್ಗೆಯೂ ಪ್ರತಿಕ್ರಿಯೆ
ಇತ್ತೀಚಿನ ತಿಂಗಳುಗಳಲ್ಲಿ ಜಾಗತಿಕ ಬೆಳವಣಿಗೆಗಳಿಂದ ಭಾರತೀಯ ರೂಪಾಯಿ ಮೌಲ್ಯದಲ್ಲಿ ಉಂಟಾಗುತ್ತಿರುವ ಏರಿಳಿತದ ಬಗ್ಗೆಯೂ ನಿರ್ಮಲಾ ಸೀತಾರಾಮನ್ ಮಾತನಾಡಿದರು. ರೂಪಾಯಿಗೆ ನಿರ್ದಿಷ್ಟ ವಿನಿಮಯ ದರವನ್ನು ಕಾಯ್ದುಕೊಳ್ಳುವುದು ಭಾರತೀಯ ರಿಸರ್ವ್ ಬ್ಯಾಂಕ್‌ನ ಉದ್ದೇಶವಲ್ಲ. ಬದಲಾಗಿ, ಕರೆನ್ಸಿ ಮಾರುಕಟ್ಟೆಯಲ್ಲಿ ಅನಗತ್ಯ ಮತ್ತು ಅತಿಯಾದ ಏರಿಳಿತವನ್ನು ನಿಯಂತ್ರಿಸಲು ಆರ್‌ಬಿಐ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
ಭಾರತದ ಆರ್ಥಿಕ ಮೂಲಭೂತ ಅಂಶಗಳು ಹಾಗೂ ವಿದೇಶಿ ವಿನಿಮಯ ಮೀಸಲು ನಿಧಿ ಸದೃಢವಾಗಿವೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.
ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಷೇರು ಮಾರುಕಟ್ಟೆಯ ತೆರಿಗೆ ನೀತಿಗೆ ಸಂಬಂಧಿಸಿದಂತೆ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದರ ಮೇಲೆ ಹೂಡಿಕೆದಾರರ ಗಮನ ನೆಟ್ಟಿದೆ.



