October 13, 2026
Tuesday, October 13, 2026
spot_img

ಇನ್ಮುಂದೆ ಮನೆಯಲ್ಲೇ ರೇಷನ್ ಕಾರ್ಡ್ ಇ-ಕೆವೈಸಿ: ನಾಳೆಯಿಂದ ಜಾರಿಗೆ ಬರಲಿದೆ ನೂತನ ‘ಅನ್ನಸೇವೆ’ ಆ್ಯಪ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಡಿತರ ಚೀಟಿದಾರರು ಇ-ಕೆವೈಸಿ (e-KYC) ಪ್ರಕ್ರಿಯೆಗಾಗಿ ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಕ್ಯೂ ನಿಲ್ಲುವ ಅಥವಾ ಬಯೋಮೆಟ್ರಿಕ್ ಸರ್ವರ್ ಸಮಸ್ಯೆಗೆ ಬೇಸತ್ತು ಕಂಗಾಲಾಗುವ ದಿನಗಳು ಇನ್ಮುಂದೆ ಇರಲ್ಲ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಸಾರ್ವಜನಿಕರ ಹಿತದೃಷ್ಟಿಯಿಂದ ಕ್ರಾಂತಿಕಾರಿ ಡಿಜಿಟಲ್ ಹೆಜ್ಜೆ ಇಟ್ಟಿದ್ದು, ಮನೆಯಲ್ಲೇ ಕುಳಿತು ಸ್ಮಾರ್ಟ್‌ಫೋನ್ ಮೂಲಕವೇ ಮುಖಚಹರೆ ಪರಿಶೀಲನೆಯೊಂದಿಗೆ ಇ-ಕೆವೈಸಿ ಪೂರ್ಣಗೊಳಿಸಲು ‘ಅನ್ನಸೇವೆ’ ಮೊಬೈಲ್ ಆ್ಯಪ್ ಅನ್ನು ಇಡೀ ರಾಜ್ಯಾದ್ಯಂತ ಅಧಿಕೃತವಾಗಿ ವಿಸ್ತರಿಸಿದೆ.

ಎಲ್ಲಾ ಜಿಲ್ಲೆಗಳಿಗೂ ಸಿಗಲಿದೆ ಡಿಜಿಟಲ್ ಸೌಲಭ್ಯ

ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ, ಬೀದರ್ ಮತ್ತು ಕೊಪ್ಪಳ ಸೇರಿದಂತೆ ರಾಜ್ಯದ ಕೇವಲ ಎಂಟು ಜಿಲ್ಲೆಗಳಲ್ಲಿ ಈ ಆನ್‌ಲೈನ್ ಸೌಲಭ್ಯವನ್ನು ಪ್ರಾಯೋಗಿಕವಾಗಿ ಚಾಲನೆಗೊಳಿಸಲಾಗಿತ್ತು. ಅಲ್ಲಿ ಸಿಕ್ಕ ಭರ್ಜರಿ ಯಶಸ್ಸಿನ ಬಳಿಕ ಇಲಾಖೆಯು ಇದೀಗ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೂ ಈ ಸೇವೆಯನ್ನು ಮುಕ್ತಗೊಳಿಸಿದೆ. ಇದರಿಂದಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಲಕ್ಷಾಂತರ ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿಗಳಿಗೆ ಕಚೇರಿ ಕೆಲಸ ಬಿಟ್ಟು ಅಲೆಯುವ ತಾಪತ್ರಯ ತಪ್ಪಿದಂತಾಗಿದೆ.

ಇ-ಕೆವೈಸಿ ಮಾಡುವುದು ಹೇಗೆ?

ಫಲಾನುಭವಿಗಳು ತಮ್ಮ ಮೊಬೈಲ್‌ನಲ್ಲಿ ಇ-ಕೆವೈಸಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಗಿಸಲು ಗೂಗಲ್ ಪ್ಲೇ ಸ್ಟೋರ್‌ನಿಂದ ‘ಅನ್ನಸೇವೆ’ ಆ್ಯಪ್, ‘ಸಿಇಜಿ ಫೇಸ್ ಕೆವೈಸಿ’, ‘ಆಧಾರ್ ಫೇಸ್ ಆರ್ಡಿ’ ಈ ಮೂರು ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ. ನಂತರ, ‘ಅನ್ನಸೇವೆ’ ಆ್ಯಪ್ ಮುಖಾಂತರ ಮುಖ ಗುರುತಿಸುವಿಕೆ ತಂತ್ರಜ್ಞಾನದ ನೆರವಿನಿಂದ ಅತ್ಯಂತ ಸರಳವಾಗಿ ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಇದನ್ನೂ ಓದಿ:

ಅಕ್ಟೋಬರ್ 20 ಕೊನೆಯ ಗಡುವು

ಪಡಿತರ ಚೀಟಿದಾರರ ಹಿತ ಕಾಯುವ ಸಲುವಾಗಿ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಮುಗಿಸಲು ಆಹಾರ ಇಲಾಖೆಯು ಅಕ್ಟೋಬರ್ 20 ರವರೆಗೆ ಅಂತಿಮ ಗಡುವನ್ನು ವಿಸ್ತರಿಸಿದೆ. ಕೊನೆಯ ದಿನಗಳಲ್ಲಿ ಸಾರ್ವಜನಿಕರು ಒಮ್ಮೆಗೆ ಲಾಗಿನ್ ಆಗುವುದರಿಂದ ಸರ್ವರ್ ದಟ್ಟಣೆ ಎದುರಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇ-ಕೆವೈಸಿ ಬಾಕಿ ಇರುವ ಗ್ರಾಹಕರು ಕೊನೆ ದಿನದವರೆಗೆ ಕಾಯದೇ ಆ್ಯಪ್ ಮೂಲಕ ತಮ್ಮ ಪರಿಶೀಲನೆಯನ್ನು ಪೂರ್ಣಗೊಳಿಸಿಕೊಳ್ಳುವುದು ಸೂಕ್ತ.

Must Read