ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಟಾರ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನು ಚೆನ್ನೈನಲ್ಲಿ ಭೇಟಿಯಾಗಿದ್ದಾರೆ. ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರ ‘ರಣಬಾಲಿ’ ಬಿಡುಗಡೆಯ ಮುನ್ನ ಈ ಭೇಟಿ ನಡೆದಿದ್ದು, ನಟ ವಿಜಯ್ ದೇವರಕೊಂಡ ಅವರು ಸಿಎಂ ವಿಜಯ್ ಅವರೊಂದಿಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಪೋಸ್ಟ್ ಮಾಡಿದ ದೇವರಕೊಂಡ
ತಮ್ಮ ಸಿನಿಮಾದ ಪ್ರಚಾರಕ್ಕಾಗಿ ಚೆನ್ನೈಗೆ ಆಗಮಿಸಿದ್ದ ಈ ಸ್ಟಾರ್ ಜೋಡಿ, ಬಿಡುವಿಲ್ಲದ ರಾಜಕೀಯ ಕೆಲಸಗಳ ನಡುವೆಯೂ ತಮಗೆ ಸಮಯಾವಕಾಶ ಮಾಡಿಕೊಟ್ಟ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರಿಗೆ ಕೃತಜ್ಞತೆ ಸಲ್ಲಿಸಿದೆ.
ಭೇಟಿಯ ನಂತರ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ವಿಜಯ್ ದೇವರಕೊಂಡ, ʼನಮ್ಮ ಪ್ರೀತಿಯ ಥಳಪತಿ ವಿಜಯ್ ಸರ್ ಅವರೊಂದಿಗೆ ಅತ್ಯಂತ ಸುಂದರವಾದ ಸಮಯವನ್ನು ಕಳೆದಿದ್ದೇವೆ. ಇಡೀ ದಿನದ ಕೆಲಸದ ಒತ್ತಡದ ನಡುವೆಯೂ ಅವರು ನಮ್ಮನ್ನು ಅಷ್ಟೇ ಪ್ರೀತಿಯಿಂದ ಬರಮಾಡಿಕೊಂಡರು. ಅಷ್ಟೇ ಅಲ್ಲದೆ, ತಮ್ಮ ಜೀವನ, ವೃತ್ತಿಜೀವನ ಹಾಗೂ ವೈಯಕ್ತಿಕ ಅನುಭವವನ್ನು ನಮ್ಮೊಂದಿಗೆ ಮುಕ್ತವಾಗಿ ಹಂಚಿಕೊಂಡರು. ವಿಜಯ್ ಸರ್ ನನ್ನ ನೆಚ್ಚಿನ ವ್ಯಕ್ತಿಯಾಗಿದ್ದಾರೆʼ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:
ಅಭಿಮಾನಿಗಳಿಂದ ಮೆಚ್ಚುಗೆ
ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ದಕ್ಷಿಣ ಭಾರತದ ಪ್ರಮುಖ ಚಿತ್ರತಾರೆಗಳು ಅವರನ್ನು ಭೇಟಿಯಾಗುತ್ತಿರುವುದು ಸಾಂಸ್ಕೃತಿಕ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಇದೀಗ ಈ ತಾರಾ ಜೋಡಿಯ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಭಾರೀ ವೈರಲ್ ಆಗುತ್ತಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.



