ಹೊಸದಿಗಂತ ಡಿಜಿಟಲ್ ಡೆಸ್ಕ್:
ವ್ಯಕ್ತಿಯೋರ್ವ ತನ್ನ ಪತ್ನಿಯ ಅಗಲಿಕೆಯ ನೋವಿನಿಂದ ಹೊರಬರಲಾಗದೆ, ತನ್ನಿಬ್ಬರು ಮಕ್ಕಳನ್ನು ಕೊಂದು, ತಾನೂ ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ. ಉದಯ್ (35), ಮಕ್ಕಳಾದ ಸಿಂಧುಶ್ರೀ (06) ಹಾಗೂ ಶ್ರೀಜಯ್ (04) ಮೃತಪಟ್ಟವರು.
ಎಸ್ಪಿಎಸ್ ನಗರದ ಉದಯ್ ರಾಣೇಬೆನ್ನೂರು ಮೂಲದ ಹೇಮಾ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಅನ್ಯೋನ್ಯವಾಗಿ ಸಂಸಾರ ನಡೆಸುತ್ತಿದ್ದರು. ಆದರೆ ಪತ್ನಿ ಹೇಮಾ ಅನಾರೋಗ್ಯಕ್ಕೆ ಒಳಗಾಗಿ 8 ತಿಂಗಳ ಹಿಂದೆ ಸಾವನ್ನಪ್ಪಿದ್ದರು.
ಈ ಬೇಸರದಿಂದ ಹೊರಬರಲಾರದ ಪತಿ ಉದಯ್ ಮಕ್ಕಳನ್ನು ಕರೆದುಕೊಂಡು ಆಗಾಗ ಪತ್ನಿ ಸಮಾಧಿ ಬಳಿ ತೆರಳುತ್ತಿದ್ದರು. ಮನೆಯವರು ಎಷ್ಟೇ ಬುದ್ದಿ ಹೇಳಿದರೂ ಸರಿಹೋಗದ ಉದಯ್ ನಿನ್ನೆ ಕೆಲಸಕ್ಕೂ ತೆರಳದೆ ಸಂಜೆ ವೇಳೆ ಇಬ್ಬರು ಮಕ್ಕಳನ್ನು ಕೊಂದು, ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮೃತನ ಕುಟುಂಬಸ್ಥರು ತಿಳಿಸಿದ್ದಾರೆ.