ಹೊಸದಿಗಂತ ವರದಿ ಮುಂಡಗೋಡ:
ಬಳೆ ಮಾರಾಟ ಮಾಡುವ ಮಹಿಳೆಯು ಕಳೆದುಕೊಂಡ 50 ಸಾವಿರ ರೂಪಾಯಿ ಬೆಲೆ ಬಾಳುವ ಬಳೆಗಳನ್ನು ಮರಳಿ ನೀಡುವ ಮೂಲಕ ಆಟೋ ಚಾಲಕನೊಬ್ಬ ಮಾನವೀಯತೆ ಮೆರೆದ ಘಟನೆ ಪಟ್ಟಣದಲ್ಲಿ ನಡೆದಿದೆ.
ಘಟನೆಯ ವಿವರ:
ಬನವಾಸಿ ಮೂಲದ ಬಳೆ ವ್ಯಾಪಾರ ಮಾಡುವ ಶಾರದಾ ಪಕ್ಕಿರಪ್ಪ ಭಜಂತ್ರಿ ಎಂಬುವರು ಶನಿವಾರ ಬಳೆಗಳ ಖರೀದಿಗೆ ಹುಬ್ಬಳ್ಳಿಗೆ ತೆರಳಿದ್ದರು. ಅಲ್ಲಿ ಸುಮಾರು 50 ಸಾವಿರ ರೂಪಾಯಿ ಬಳೆಗಳನ್ನು ಖರೀದಿಸಿ ಹುಬ್ಬಳ್ಳಿಯಿಂದ ತಾಲೂಕಿನ ಮಳಗಿ ಗ್ರಾಮಕ್ಕೆ ಬಸ್ ಟಿಕೇಟ್ ಪಡೆದು ಬಸ್ ನಲ್ಲಿ ಕುಳಿತುಕೊಂಡಿರುತ್ತಾರೆ. ಆದರೆ ಬಸ್ ಕಂಡಕ್ಟರ್ ಎಡವಟ್ಟಿನಿಂದ ಮುಂಡಗೋಡದ ಪಟ್ಟಣ ಪಂಚಾಯತಿ ಹತ್ತಿರ ಬಸ್ ನಿಲ್ಲಿಸಿದಾಗ ಬಳೆ ವ್ಯಾಪಾರಿಯ ಬಳೆಗಳ ಚೀಲವು ಮುಂಡಗೋಡದಲ್ಲೇ ಉಳಿದುಕೊಂಡು ಬಿಡುತ್ತದೆ. ಆದರೆ ಮಹಿಳಾ ವ್ಯಾಪಾರಿ ಮಾತ್ರ ಮಳಗಿ ಗ್ರಾಮಕ್ಕೆ ತೆರಳುತ್ತಾರೆ, ಅಲ್ಲಿ ಹೋಗಿ ತಮ್ಮ ಲಗೇಜ್ ಬ್ಯಾಗ್ ಹುಡುಕಾಡಿದಾಗ, ಕಂಡಕ್ಟರ್ ಮುಂಡಗೋಡದಲ್ಲಿ ಇಳಿಸಿರುವ ಬಗ್ಗೆ ತಿಳಿದುಬರುತ್ತದೆ.
ಬಳೆಗಳ ಚೀಲ ಕಳೆದುಕೊಂಡ ಶಾರದಮ್ಮ ಕೂಡಲೆ ಠಾಣೆಗೆ ಧಾವಿಸಿದ್ದಾರೆ, ಕರ್ತವ್ಯದಲ್ಲಿದ್ದ ಪೊಲೀಸರು ಎಲ್ಲ ಕಡೆ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಪತ್ತೆಯಾಗದ ಕಾರಣ ಠಾಣೆಯ ಮಹಿಳಾ ಪೋಲೀಸ್ ರೇಖಾ ಹುಳ್ಳೆಣ್ಣನವರ ಎಂಬುವರು ಬಳೆ ವ್ಯಾಪಾರಿಗೆ ರಾತ್ರಿ ಅಲ್ಲಿಯೇ ಆಶ್ರಯ ನೀಡಿರುತ್ತಾರೆ.
ಈ ನಡುವೆ ಪಟ್ಟಣ ಪಂಚಾಯತಿ ಹತ್ತಿರ ಅನಾಥವಾಗಿದ್ದ ಚಿಲವನ್ನು ಗಮನಿಸಿದ ಆಟೋ ಚಾಲಕ ಬಸವರಾಜ ನೀಡಗುಂಡಿ ಎಂಬುವನು ಚೀಲದ ಹತ್ತಿರ ಹೋಗಿ ಬಿಚ್ಚಿ ನೋಡಿದಾಗ ಬಳೆಗಳು ಇರುವುದು ಕಂಡು ಬಂದಿದ್ದು, ಅದರಲ್ಲಿ ಬಳೆ ವ್ಯಾಪಾರ ಮಾಡುವ ಕುಟುಂಬದವರ ಪೋನ್ ನಂಬರ್ ಇತ್ತು. ಹಾಗಾಗಿ ಶನಿವಾರ ರಾತ್ರಿಯೆ ಪೋನ್ ಕರೆ ಮಾಡಿ ನಿಮ್ಮ ಬಳೆ ಚೀಲ ನಮ್ಮ ಹತ್ತಿರ ಇದೆ ತೆಗೆದುಕೊಂಡು ಹೋಗಿ ಎಂದು ಮಾಹಿತಿ ನೀಡಿರುತ್ತಾರೆ.
ಮರುದಿನ ಬೆಳಿಗ್ಗೆ ಪೊಲೀಸ್ ಸಿಬ್ಬಂದಿ ಬಳೆ ಚೀಲ ಪತ್ತೆಹಚ್ಚಲು ಪ್ರಾರಂಬಿಸುತ್ತಾರೆ. ಬಳೆ ವ್ಯಾಪಾರ ಮಾಡುವ ಮಹಿಳೆಯ ಮಗಳು ತನ್ನ ತಾಯಿಗೆ ಆಟೋ ಚಾಲಕ ಪೋನ್ ಕರೆ ಮಾಡಿದರ ಬಗ್ಗೆ ಮಾಹಿತಿ ನೀಡುತ್ತಾಳೆ. ಆಗ ಪೋಲೀಸರು ಆಟೋ ಚಾಲಕನಿಗೆ ಪೋನ್ ಕರೆ ಮಾಡಿ ವಿಚಾರಣೆ ನಡೆಸುತ್ತಾರೆ. ಬಳಿಕ ಆಟೋ ಚಾಲಕ ಬಸವರಾಜ ಬಳೆಯ ಚಿಲವನ್ನು ಶಾರದ ಭಜಂತ್ರಿ ಎಂಬುವರಿಗೆ ಸಿಪಿಐ ಬಿ.ಎಸ್ ಲೋಕಾಪುರ, ಪಿಎಸ್ ಐ ಎಚ್.ಬಿ ಕುಡಗುಂಟಿ ಹಾಗೂ ಸಿಬ್ಬಂದಿಗಳಾದ ರೇಖಾ, ತಿರುಪತಿ, ಬಸವರಾಜ ಸಮ್ಮುಖದಲ್ಲಿ ಒಪ್ಪಿಸಿದರು.