August 13, 2026
Thursday, August 13, 2026
spot_img

ಕೆಎಎಸ್‌ ಪರೀಕ್ಷೆಯಲ್ಲೂ ಭ್ರಷ್ಟಾಚಾರದ ವಾಸನೆ; ವಿಧಾನಸೌಧ ಠಾಣೆಯಲ್ಲಿ ದೂರು ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶಾದ್ಯಂತ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ಸದ್ದು ತಣ್ಣಗಾಗುವ ಮುನ್ನವೇ, ಇತ್ತ ಕರ್ನಾಟಕದಲ್ಲೂ ಪ್ರತಿಷ್ಠಿತ ಕೆಎಎಸ್ ಪರೀಕ್ಷೆಯಲ್ಲಿ ಬೃಹತ್ ಭ್ರಷ್ಟಾಚಾರ ನಡೆದಿರುವ ಗಂಭೀರ ಆರೋಪ ಕೇಳಿಬಂದಿದೆ. ಸಂದರ್ಶನದಲ್ಲಿ ಕೇವಲ 25 ಅಂಕಗಳನ್ನು ಕೊಡಿಸಲು ಬರೋಬ್ಬರಿ ಒಂದೂವರೆ ಕೋಟಿ ರೂ. ಡೀಲ್ ಕುದುರಿಸಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ವಿಧಾನಸೌಧ ಪೊಲೀಸ್ ಠಾಣೆಗೆ ದೂರು:

ಒಟ್ಟು 384 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಈ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದ್ದು, ಈ ಕುರಿತು ವಿಧಾನಸೌಧ ಪೊಲೀಸ್ ಠಾಣೆಗೆ ಅಧಿಕೃತವಾಗಿ ದೂರು ಸಲ್ಲಿಕೆಯಾಗಿದೆ. ಈ ದೂರಿನಲ್ಲಿ ಲಂಚ ನೀಡಿದ ಅಭ್ಯರ್ಥಿಯ ಹೆಸರನ್ನು ನೇರವಾಗಿ ಉಲ್ಲೇಖಿಸಿರುವುದು ಕೆಪಿಎಸ್‌ಸಿ ವಲಯದಲ್ಲಿ ತಲ್ಲಣ ಮೂಡಿಸಿದೆ.

ಕೆಪಿಎಸ್‌ಸಿ ಸದಸ್ಯನ ಜತೆ ಕೋಟಿ ಕೋಟಿ ಡೀಲ್?:

ಕಾಂತಕುಮಾರ್ ಎಂಬ ಕೆಎಎಸ್ ಅಭ್ಯರ್ಥಿ ಹುದ್ದೆ ಗಿಟ್ಟಿಸಿಕೊಳ್ಳಲು ಈ ದೊಡ್ಡ ಮೊತ್ತದ ಲಂಚ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಅಭ್ಯರ್ಥಿಯು ಕೆಪಿಎಸ್‌ಸಿಯ ಹಾಲಿ ಸದಸ್ಯರೊಬ್ಬರ ಜತೆ ನೇರ ಸಂಪರ್ಕದಲ್ಲಿದ್ದು, ಸಂದರ್ಶನದಲ್ಲಿ ಅಂಕ ಪಡೆಯಲು ಈ ಡೀಲ್ ಮಾಡಿಕೊಂಡಿದ್ದ ಎನ್ನಲಾಗಿದೆ.

ಇದನ್ನೂ ಓದಿ:

ಪುರಾವೆಯಾಗಿ ಸಿಕ್ಕಿತು ಸಿಡಿಆರ್ :

ಲಂಚದ ಆರೋಪಕ್ಕೆ ಪೂರಕವಾಗಿ ಸಾಕ್ಷ್ಯವೊಂದು ಲಭ್ಯವಾಗಿದ್ದು, ಆರೋಪಿತ ಅಭ್ಯರ್ಥಿ ಮತ್ತು ಕೆಪಿಎಸ್‌ಸಿ ಸದಸ್ಯನ ನಡುವೆ ನಡೆದಿರುವ ದೂರವಾಣಿ ಕರೆಗಳ ವಿವರಗಳ ನಕಲನ್ನು ದೂರಿನೊಂದಿಗೆ ಲಗತ್ತಿಸಲಾಗಿದೆ. ಇಬ್ಬರ ನಡುವೆ ಎಷ್ಟು ಬಾರಿ ಮಾತುಕತೆ ನಡೆದಿದೆ ಎಂಬ ಸಂಪೂರ್ಣ ಮಾಹಿತಿ ಈ ಸಿಡಿಆರ್‌ನಲ್ಲಿದೆ ಎಂದು ತಿಳಿದುಬಂದಿದೆ.

ಸದ್ಯ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಈ ಸೂಕ್ಷ್ಮ ಪ್ರಕರಣದ ಗಾಂಭೀರ್ಯತೆಯನ್ನು ಅರಿತಿರುವ ವಿಧಾನಸೌಧ ಪೊಲೀಸರು ಮುಂದಿನ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !