ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಂಢೀಗಡದ ಮಾಲ್‌ವೊಂದರಲ್ಲಿ ಇಂಡೋರ್ ಗೇಮ್‌ನಲ್ಲಿ ಆಟವಾಡುತ್ತಿದ್ದ ಬಾಲಕ ಆಕಸ್ಮಿಕವಾಗಿ ಕೆಳಗೆ ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿದೆ.
ಬಹುತೇಕ ಮಹಾನಗರಿಗಳ ಮಾಲ್‌ಗಳಲ್ಲಿ ಮಕ್ಕಳನ್ನು ಸೆಳೆಯುವುದಕ್ಕಾಗಿಯೇ ಸಾಕಷ್ಟು ಇಂಡೋರ್ ಗೇಮ್‌ಗಳಿರುತ್ತವೆ. ಅದೇ ರೀತಿ ಚಂಡೀಗಢದಲ್ಲಿಯೂ ಮಾಲ್‌ವೊಂದಕ್ಕೆ ತಮ್ಮ ಮಗನನ್ನು ಆಟವಾಡಿಸುವುದಕ್ಕೆ ಕರೆದುಕೊಂಡ ಪೋಷಕರು ಗೇಮ್ ನಿರ್ವಾಹಕರ ಎಡವಟ್ಟಿನಿಂದಾಗಿ ಮಗನನ್ನು ಕಳೆದುಕೊಳ್ಳುವಂತಾಗಿದೆ. ಚಂಢೀಗಡದ ಎಲಾಂಟೆ ಮಾಲ್‌ನಲ್ಲಿ ಈ ಘಟನೆ ನಡೆದಿದೆ. ಮೃತ ಬಾಲಕನನ್ನು 11 ವರ್ಷದ ಶಹ್ಬಾಜ್ ಸಿಂಗ್ ಎಂದು ಗುರುತಿಸಲಾಗಿದೆ.
ಮಕ್ಕಳು ಆಟವಾಡುವ ಪುಟಾಣಿ ಟ್ರೈನ್‌ನಲ್ಲಿ ಮಕ್ಕಳು ಕುಳಿತಿದ್ದಾರೆ. ಆದರೆ ರೈಡ್ ವೇಳೆ ಬಾಲಕ ಶಹ್ಬಾಜ್ ಸಿಂಗ್ ಇದ್ದ ಕಂಪಾರ್ಟ್‌ಮೆಂಟ್ ಮಗುಚಿಬಿದ್ದಿದೆ. ಇದರಿಂದ ಶಹ್ಬಾಜ್ ಸಿಂಗ್ ತಲೆಗೆ ಗಂಭೀರ ಗಾಯವಾದ ಪರಿಣಾಮ ಆತ ಮೃತಪಟ್ಟಿದ್ದಾರೆ. ಈತನ ಜೊತೆಗಿದ್ದ ಸಂಬಂಧಿ ಬಾಲಕ ಅನಾಹುತದಿಂದ ಪಾರಾಗಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗ ಪುಟಾಣಿ ಟ್ರೈನ್ ಚಾಲಕ ಹಾಗೂ ಮಾಲ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿದ್ದು, ಚಾಲಕನ್ನು ಬಂಧಿಸಿದ್ದಾರೆ. ಇಂಡಸ್ಟ್ರಿಯಲ್ ಏರಿಯಾದ ಪೊಲೀಸ್ ಠಾಣೆಯ ಎಸ್‌ಹೆಚ್‌ಒ ಇನ್ಸ್‌ಪೆಕ್ಟರ್ ಜಸ್ಪಾಲ್ ಸಿಂಗ್ ಭುಲ್ಲರ್ ಮಾತನಾಡಿ ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ. ಮಕ್ಕಳ ಟ್ರೈನ್‌ನ ಚಾಲಕ ಸೌರವ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಪಂಜಾಬ್‌ನ ನವನ್‌ಶಹರ್ ನಿವಾಸಿಯಾದ ಜಿತೇಂದ್ರ ಪಾಲ್ ಸಿಂಗ್ ತಮ್ಮ ಪತ್ನಿ ಹಾಗೂ ಮಗ ಶಹ್ಬಾಜ್ ಹಾಗೂ ತಮ್ಮ ಸಂಬಂಧಿಕರೊಬ್ಬರ ಕುಟುಂಬದೊಂದಿಗೆ ಚಂಢೀಗಡ ನಗರಕ್ಕೆ ಒಂದು ದಿನದ ಔಟಿಂಗ್‌ಗಾಗಿ ಆಗಮಿಸಿದ್ದರು. ಅವರು ಚಂಢೀಗಢದ ಎಲಾಂಟೆ ಮಾಲ್‌ಗೆ ಆಗಮಿಸಿದ್ದು, ಅಲ್ಲಿ ರಾತ್ರಿ 9.30ರ ಸಮಯದಲ್ಲಿ ಶಹ್ಬಾಜ್ ಹಾಗೂ ಆತನ ಸಂಬಂಧಿ ಬಾಲಕ ಟ್ರೈನ್ ರೈಡ್ ಮಾಡಿದ್ದಾರೆ. ಇಬ್ಬರು ಬಾಲಕರು ರೈಲಿನ ಲಾಸ್ಟ್ ಬೋಗಿಯಲ್ಲಿ ಕುಳಿತಿದ್ದು, ರೈಲಿನ ರೈಡ್ ವೇಳೆ ಶಹ್ಬಾಜ್ ಕುಳಿತಿದ್ದ ಬೋಗಿ ಮಗುಚಿಬಿದ್ದು ಗಂಭೀರ ಗಾಯಗೊಂಡಿದ್ದಾನೆ. ಇದರಿಂದ ಚಿಕಿತ್ಸೆ ಪಡೆಯಲಾಗದೇ ಆತ ಸಾವನ್ನಪ್ಪಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಎಲಾಂಟ್ ಮಾಲ್ ಪ್ರಕಟಣೆ ಹೊರಡಿಸಿದ್ದು, ನಮ್ಮ ಸಂಸ್ಥೆಯೊಳಗೆ ಸೇವೆ ನೀಡುವ ಸಂಸ್ಥೆಯೊಂದರಲ್ಲಿ ಜೂನ್ 22 ರಂದು ದುರಾದೃಷ್ಟಕರ ಘಟನೆ ನಡೆದಿದ್ದು, ನಮ್ಮ ತುರ್ತು ತಂಡ ಕೂಡಲೇ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದರೂ ಕೂಡ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಕೂಡಲೇ ಘಟನೆಗೆ ಸಂಬಂಧಿಸಿದಂತೆ ಲೋಕಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ನಾವು ಅಧಿಕಾರಿಗಳೊಂದಿಗೆ ಸಹಕರಿಸುತ್ತಿದ್ದೇವೆ. ಸಂಕಷ್ಟಕ್ಕೊಳಗಾದ ಕುಟುಂಬಕ್ಕೆ ನಾವು ತೀವ್ರ ಸಂತಾಪ ವ್ಯಕ್ತಪಡಿಸುತ್ತೇವೆ ಎಂದು ನೆಕ್ಸಸ್ ಎಲಾಂಟ್ ಮಾಲ್ ಹೇಳಿದೆ.