ಹೊಸದಿಗಂತ ವರದಿ, ಮಳವಳ್ಳಿ :
ಚಲಿಸುತ್ತಿದ್ದ ಬೈಕ್ ಮೇಲೆ ರಸ್ತೆ ಬದಿಯ ಮರದ ರಂಬೆ ಮುರಿದು ಬಿದ್ದು ಸ್ಥಳದಲ್ಲೇ ಗೃಹಿಣಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಹುಸ್ಕೂರು ಗ್ರಾಮದ ಬಳಿ ನಡೆದಿದೆ.
ಹೆಚ್. ಬಸಾಪುರ ಗ್ರಾಮದ ನಿವಾಸಿ ಚಿಕ್ಕತಾಯಮ್ಮ (55) ಸಾವನ್ನಪ್ಪಿರುವ ದುರ್ದೇವಿ. ಹೊನ್ನಾಯಕನಹಳ್ಳಿ ಗ್ರಾಮದ ತನ್ನ ಸಂಬಂಧಿಕರ ಮನೆಗೆ ಕಾರ್ಯನಿಮಿತವಾಗಿ ಹೋಗಿ ವಾಪಸ್ಸು ತನ್ನ ಮಗ ಶಿವರಾಜನ ಜೊತೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಹುಸ್ಕೂರು ಗ್ರಾಮದ ಬಳಿ ರಸ್ತೆ ಬದಿಯ ಮರದ ರಂಬೆ ಮುರಿದು ಚಿಕ್ಕತಾಯಮ್ಮ ಅವರ ತಲೆ ಮೇಲೆ ಬಿದ್ದಿದೆ.
ಮರದ ಕೊಂಬೆ ಬಿದ್ದ ರಭಸಕ್ಕೆ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವ ಉಂಟಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.
ಬೈಕ್ ಚಲಾಯಿಸುತ್ತಿದ್ದ ಅವರ ಪುತ್ರ ಶಿವರಾಜು ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಯದಿಂದ ಪಾರಾಗಿದ್ದಾರೆ. ಸಬ್ ಇನ್ಸ್ಪೆಕ್ಟರ್ ಬಿ. ಮಹೇಂದ್ರ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.