ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಇತ್ತೀಚೆಗಷ್ಟೇ ಹಾಲಿನ ದರ ಏರಿಕೆಯಾದ ಬೆನ್ನಲ್ಲೇ ಈಗ ನಂದಿನಿ ಮೊಸರಿನ ದರವನ್ನೂ ಭಾರಿ ಪ್ರಮಾಣದಲ್ಲಿ ಹೆಚ್ಚಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಎಂದೂ ಕಾಣದ ಇಂತಹ ಬೆಲೆ ಏರಿಕೆಯು ಬಡ ಹಾಗೂ ಕೆಳ-ಮಧ್ಯಮ ವರ್ಗದ ಕುಟುಂಬಗಳ ಹೊಟ್ಟೆಯ ಮೇಲೆ ಎಳೆದ ನೇರ ದಾಳಿಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಶನಿವಾರ ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ಸರ್ಕಾರವು ತನ್ನ ಆರ್ಥಿಕ ದುರಾಡಳಿತ ಮತ್ತು ಖಾಲಿ ಬೊಕ್ಕಸವನ್ನು ಮುಚ್ಚಿಕೊಳ್ಳಲು ಕೆಎಂಎಫ್ (KMF) ಮೂಲಕ ಮೊಸರಿನ ದರವನ್ನು ಅತಿರೇಕದ ಮಟ್ಟಕ್ಕೆ ಏರಿಸಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಅರ್ಧ ಲೀಟರ್ ಮೊಸರಿನ ಹಳೆಯ ಬೆಲೆ 28 ರೂ.ರಿಂದ ಈಗ 34ರೂ.ಗೆ ಕ್ಕೆ ಏರಿಕೆಯಾಗಿದೆ. ಹಾಗೆಯೇ, ಒಂದು ಲೀಟರ್ ಮೊಸರಿನ ಹಳೆಯ ಬೆಲೆ 54 ರೂ.ರಿಂದ ಈಗ ಬರೋಬ್ಬರಿ 68 ರೂ.ಗೆ ತಲುಪಿದೆ.
‘ಮೊಸರು ಐಷಾರಾಮಿ ವಸ್ತುವಲ್ಲ’ – ಜೋಶಿ ಕಿಡಿ
“ಮೊಸರು ಎನ್ನುವುದು ಶ್ರೀಮಂತರು ಬಳಸುವ ಐಷಾರಾಮಿ ವಸ್ತುವಲ್ಲ, ಅದು ಪ್ರತಿಯೊಬ್ಬ ಸಾಮಾನ್ಯ ಮನುಷ್ಯನ ದಿನನಿತ್ಯದ ಆಹಾರವಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಯಾವುದೇ ಅನುದಾನವಿಲ್ಲ. ಆಡಳಿತಾತ್ಮಕ ವೈಫಲ್ಯದಿಂದಾಗಿ ಬೊಕ್ಕಸವನ್ನು ಬರಿದಾಗಿಸಿಕೊಂಡಿರುವ ಸರ್ಕಾರ, ತನ್ನ ರಾಜಕೀಯ ತಪ್ಪುಗಳಿಗೆ ಈಗ ಬಡ ಜನರಿಂದ ದಂಡ ವಸೂಲಿ ಮಾಡುತ್ತಿದೆ. ಇದು ಸಂಪೂರ್ಣ ಜನವಿರೋಧಿ ನೀತಿಯಾಗಿದೆ” ಎಂದು ಕೇಂದ್ರ ಸಚಿವರು ಟೀಕಿಸಿದ್ದಾರೆ.
‘ಈ ಸರ್ಕಾರ ಬಹಳ ದಿನ ಇರಲ್ಲ’-ಆರ್. ಅಶೋಕ್ ವಾಗ್ದಾಳಿ
ಮತ್ತೊಂದೆಡೆ, ರಾಜ್ಯ ಸರ್ಕಾರದ ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿರುವ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಅವರು, ಕಾಂಗ್ರೆಸ್ ಆಡಳಿತಕ್ಕೆ ಬಂದಾಗಿನಿಂದ ಈಗಾಗಲೇ ನಾಲ್ಕನೇ ಬಾರಿಗೆ ಹಾಲಿನ ದರ ಏರಿಕೆಯಾಗಿದೆ ಎಂದು ಆರೋಪಿಸಿದ್ದಾರೆ. ಪ್ರಸಕ್ತ ಸರ್ಕಾರವು ಆರ್ಥಿಕವಾಗಿ ಸಂಪೂರ್ಣ ‘ಪಾಪರ್’ ಆಗಿದ್ದು, ಇದು ಬಹಳ ದಿನಗಳ ಕಾಲ ಆಡಳಿತದಲ್ಲಿ ಇರುವುದಿಲ್ಲ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ:
ಹಬ್ಬದ ದಿನಗಳಲ್ಲೇ ಹಾಲಿನ ದರ ಲೀಟರ್ಗೆ 8 ರೂ. ಮತ್ತು ಮೊಸರಿನ ದರ ಲೀಟರ್ಗೆ 14ರೂ. ರಷ್ಟು ದುಬಾರಿಯಾಗಿರುವುದು ಸಾರ್ವಜನಿಕ ವಲಯದಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿದೆ.



