ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾಪು ತಾಲೂಕಿನ ಮಲ್ಲಾರು ಬಳಿ ಚಲಿಸುತ್ತಿದ್ದ ರಿಕ್ಷಾದ ಮೇಲೆ ಮರಬಿದ್ದ ಪ್ರಕರಣದಲ್ಲಿ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪಾದೂರಿನ ಕೂರಾಲಿನ ಪುಷ್ಪಾ (49) ಕಳತ್ತೂರು ನಿವಾಸಿ ಕೃಷ್ಣ ಮೃತಪಟ್ಟಿದ್ದಾರೆ.
ಕಾಪುವಿನಿಂದ ಶಾಂತಿಗುಡ್ಡೆಗೆ ರಿಕ್ಷಾದಲ್ಲಿ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ತೆರಳುತ್ತಿದ್ದ ವೇಳೆ ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಬೀಸಿದ ಭಾರೀ ಗಾಳಿಗೆ ಮಲ್ಲಾರು ಬಳಿ ರಸ್ತೆ ಬದಿಯಲ್ಲಿದ್ದ ಮರವು ರಿಕ್ಷಾದ ಮೇಲೆ ಬಿದ್ದಿದೆ. ಪರಿಣಾಮ ರಿಕ್ಷಾದಲ್ಲಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕ ಸಣ್ಣ ಪುಟ್ಟ ಗಾಯದೊಂದಿಗೆ ಅದೃಷ್ಟವಶಾತ್ ಪಾರಾಗಿದ್ದಾರೆ.
2 ಗಂಟೆಯ ಕಾರ್ಯಾಚರಣೆ
ಬೃಹತ್ ಮರವು ಬಿದ್ದ ಪರಿಣಾಮ ರಸ್ತೆಯೂ ಸಂಪೂರ್ಣ ಬಂದ್ ಆಗಿದ್ದು, ಸ್ಥಳೀಯ ಪ್ರಶಾಂತ್ ರಾವ್ ಅವರ ಜೆ.ಸಿ.ಬಿಯ ಮೂಲಕ, ಸ್ಥಳೀಯರು ಮತ್ತು ಕಾಪು ಪೋಲಿಸರು, ಕೆ.ಇ.ಬಿ ಲೈನ್ ಮೆನ್ ಅಗ್ನಿಶಾಮಕ ದಳದವರು ಸೇರಿಕೊಂಡು ಸುಮಾರು 2 ಗಂಟೆಯ ಕಾರ್ಯಚರಣೆಯ ಬಳಿಕ ಮೃತದೇಹವನ್ನು ಹೊರತೆಗೆಯಲಾಯಿತು.
ನೂರಾರು ಜನರು ಸ್ಥಳಕ್ಕೆ ದೌಡು
ಘಟನೆ ನಡೆದಿದೆ ಎಂದು ತಿಳಿಯುತ್ತಿದ್ದಂತೆ ಸ್ಥಳೀಯ ನೂರಾರು ಯುವಕರು ಸ್ಥಳಕ್ಕೆ ಆಗಮಿಸಿ, ಮರವನ್ನು ಮೇಲಕ್ಕೆತ್ತುವಲ್ಲಿ ಸಹಕರಿಸಿದರು. ಮತ್ತು ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿದ್ದು, ಟ್ರಾಫಿಕ್ ಮುಕ್ತಗೊಳಿಸಲು ಪೋಲಿಸರೊಂದಿಗೆ ಸಹಕರಿಸಿದರು.
ಸ್ಥಳಕ್ಕೆ ಕಾಪು ಕಾಂಗ್ರೆಸ್ ಮುಖಂಡ ವಿನಯ್ ಕುಮಾರ್ ಸೊರಕೆ, ಬಿಜೆಪಿ ಮುಖಂಡರಾದ ಅರುಣ್ ಶೆಟ್ಟಿ ಪಾದೂರು, ನವೀನ್ ಶೆಟ್ಟಿ ಕುತ್ಯಾರು, ಗಣೇಶ್ ಶೆಟ್ಟಿ ಪೈಯಾರು ಸೇರಿದಂತೆ ಅನೇಕ ಮುಖಂಡರು ಭೇಟಿ ನೀಡಿದರು.