ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಶತಮಾನಕ್ಕೂ ಹೆಚ್ಚು ಹಳೆಯದಾದ ಐತಿಹಾಸಿಕ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿರುವ ಘಟನೆಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಕೃತ್ಯವನ್ನು ಭಾರತ ಸರ್ಕಾರವು ‘ವಿಧ್ವಂಸಕ ಕೃತ್ಯ’ ಎಂದು ಹೇಳಿದ್ದು, ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳನ್ನು ರಕ್ಷಿಸುವಲ್ಲಿ ಪಾಕ್ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಲಾಹೋರ್‌ನಿಂದ ಸುಮಾರು 130 ಕಿಲೋಮೀಟರ್ ದೂರದಲ್ಲಿರುವ ನರೋವಾಲ್‌ನ ಸಿರಾಜ್ ಗ್ರಾಮದಲ್ಲಿದ್ದ ಈ ಪ್ರಾಚೀನ ಮಂದಿರವನ್ನು ಆಗಸ್ಟ್ 21 ರಂದು ನೆಲಸಮಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಘಟನೆಯ ಕುರಿತು ತಕ್ಷಣವೇ ತನಿಖೆ ನಡೆಸಿ ತಪ್ಪಿತಸ್ಥರನ್ನು ಜೈಲಿಗಟ್ಟಬೇಕು ಮತ್ತು ಅಪವಿತ್ರಗೊಳಿಸಲಾದ ಮಂದಿರವನ್ನು ಮರುನಿರ್ಮಾಣ ಮಾಡಿಕೊಡಬೇಕು ಎಂದು ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮದರಸಾಕ್ಕಾಗಿ ದೇವಸ್ಥಾನ ಧ್ವಂಸ?
ಪಾಕಿಸ್ತಾನ ಮಸಿಹಾ ಮಿಲ್ಲತ್ ಪಕ್ಷದ ಅಧ್ಯಕ್ಷ ಅಸ್ಲಾಮ್ ಪರ್ವೇಜ್ ಸಹೋತ್ರಾ ಹಾಗೂ ಸ್ಥಳೀಯ ಹಿಂದೂ ಮುಖಂಡರು ನೀಡಿರುವ ದೂರಿನ ಪ್ರಕಾರ, ಪಾಕಿಸ್ತಾನದಲ್ಲಿ ನಿಷೇಧಿತ ಉಗ್ರಗಾಮಿ ಇಸ್ಲಾಮಿಕ್ ಸಂಘಟನೆಯಾದ ‘ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನ್’ ಕಾರ್ಯಕರ್ತರು ಮದರಸಾವನ್ನು ವಿಸ್ತರಿಸುವ ಉದ್ದೇಶದಿಂದ ಈ ಮಂದಿರವನ್ನು ಧ್ವಂಸಗೊಳಿಸಿದ್ದಾರೆ. ಮಂದಿರವನ್ನು ಕೆಡವಿದ ನಂತರ ಅದರ ಶಿಖರದಲ್ಲಿದ್ದ ಬೆಲೆಬಾಳುವ ಲೋಹದ ಫಿಟ್ಟಿಂಗ್‌ಗಳು ಹಾಗೂ ಇಟ್ಟಿಗೆಗಳನ್ನು ಲೂಟಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಮಳೆ ನೆಪ ಹೇಳಿದ ಪಾಕ್ ಅಧಿಕಾರಿಗಳು
ಆದರೆ, ಈ ಕೃತ್ಯವನ್ನು ಮುಚ್ಚಿಹಾಕಲು ಯತ್ನಿಸುತ್ತಿರುವ ಪಾಕಿಸ್ತಾನದ ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ ಅಧಿಕಾರಿಗಳು, ಈ ಮಂದಿರಕ್ಕೆ ಯಾವುದೇ ಹೆಸರಿರಲಿಲ್ಲ. ಇದು 100 ರಿಂದ 125 ವರ್ಷ ಹಳೆಯದಾದ್ದರಿಂದ ಇತ್ತೀಚೆಗೆ ಸುರಿದ ಭಾರೀ ಮಳೆಗೆ ತಾನಾಗಿಯೇ ಕುಸಿದು ಬಿದ್ದಿದೆ ಎಂದು ಸಮರ್ಥನೆ ನೀಡಿದ್ದಾರೆ.
ಆದರೆ, ಸ್ಥಳೀಯ ಪೊಲೀಸರು ಮತ್ತು ಅಧಿಕಾರಿಗಳಿಗೆ ಈ ಮಂದಿರದ ಮೇಲಿರುವ ಭದ್ರತಾ ಭೀತಿಯ ಬಗ್ಗೆ ಕಳೆದ ಏಪ್ರಿಲ್ ತಿಂಗಳಲ್ಲೇ ವರದಿ ಸಲ್ಲಿಕೆಯಾಗಿದ್ದರೂ ಪಾಕ್ ಆಡಳಿತ ಮಂಡಳಿ ಕಣ್ಣು ಮುಚ್ಚಿ ಕುಳಿತಿತ್ತು ಎಂಬುದು ಈಗ ಬಯಲಾಗಿದೆ.
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ, ಮಂದಿರಗಳ ಧ್ವಂಸ ಹಾಗೂ ಬಲವಂತದ ಧರ್ಮ ಮತಾಂತರದ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಜಾಗತಿಕ ಮಟ್ಟದಲ್ಲಿ ಮಾನವ ಹಕ್ಕುಗಳ ಸಂಘಟನೆಗಳು ಪಾಕಿಸ್ತಾನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿವೆ.



