ಹೊಸದಿಗಂತ ವರದಿ ಕಾರವಾರ:
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರಯತ್ನದಿಂದ ರಾಜ್ಯದ 67 ಗ್ರಾಮೀಣ ಅಂಚೆ ಕಚೇರಿಗಳಿಗೆ ಬಿಎಸ್ಸೆನ್ನೆಲ್ (BSNL) ಸಿಮ್ ಮಂಜೂರು ಆಗಿದೆ.
ರಾಜ್ಯದ ವಿವಿಧ ಗ್ರಾಮೀಣ ಅಂಚೆ ಕಚೇರಿಗಳಲ್ಲಿ ಬಿಎಸ್ಸೆನ್ನೆಲ್ ಸಿಮ್ ಕಾರ್ಡ್‌ಗಳ ಅಲಭ್ಯತೆಯಿಂದಾಗಿ ಸಾರ್ವಜನಿಕರಿಗೆ ಮತ್ತು ಕಲ್ಯಾಣ ಯೋಜನೆಗಳ ಫಲಾನುಭವಿಗಳಿಗೆ ಹಣಕಾಸು ಸೇವೆ ಪಡೆಯಲು ತೀವ್ರ ಅಡಚಣೆಯಾಗುತ್ತಿತ್ತು. ಈ ಸಮಸ್ಯೆಯನ್ನು ಸಾರ್ವಜನಿಕರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಗಮನಕ್ಕೆ ತಂದಿದ್ದರು.
ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಯ 43, ಶಿವಮೊಗ್ಗದ 22 ಹಾಗೂ ಚಿಕ್ಕಮಗಳೂರಿನ 2 ಗ್ರಾಮೀಣ ಅಂಚೆ ಕಚೇರಿಗಳ ವ್ಯಾಪ್ತಿಯಲ್ಲಿ ಬಿಎಸ್ಸೆನ್ನೆಲ್ ಹೊರತುಪಡಿಸಿ ಬೇರೆ ಖಾಸಗಿ ನೆಟ್‌ವರ್ಕ್ ಇರಲಿಲ್ಲ. ಸಿಮ್ ಲಭ್ಯವಿಲ್ಲದೇ ಗ್ರಾಮೀಣ ಭಾಗದ ವೃದ್ಧರು, ರೈತರು, ವಿಧವೆಯರು ಮತ್ತು ವಿಕಲಚೇತನರು ಪೆನ್ಷನ್ ಹಾಗೂ ಬ್ಯಾಂಕಿಂಗ್ ಸೇವೆಗಳಿಂದ ವಂಚಿತರಾಗಿದ್ದರು.
ಈ ಗಂಭೀರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸಂಸದರು, ಕೇಂದ್ರ ಸಂಪರ್ಕ ಸಚಿವರಾದ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರನ್ನು ಖುದ್ದಾಗಿ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದರು. ಐಪಿಪಿಬಿ (ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್) ಮೂಲಕ ತಕ್ಷಣವೇ ಬಿಎಸ್ಸೆನ್ನೆಲ್ಸಿಮ್ ಒದಗಿಸುವಂತೆ ಒತ್ತಾಯಿಸಿದ್ದರು.
ಸಂಸದರ ಶ್ರಮದ ಫಲವಾಗಿ ಕೇಂದ್ರ ಸರ್ಕಾರ ಹಾಗೂ ಐಪಿಪಿಬಿ ಸಂಸ್ಥೆಯು ಬಿಎಸ್ಸೆನ್ನೆಲ್ ನೆಟ್‌ವರ್ಕ್ ಹೊಂದಿರುವ ರಾಜ್ಯದ ಎಲ್ಲಾ 67 ಗ್ರಾಮೀಣ ಅಂಚೆ ಕಚೇರಿಗಳಿಗೆ ಬಿಎಸ್ಸೆನ್ನೆಲ್ ಸಿಮ್ ಒದಗಿಸಿ ಸಕ್ರಿಯಗೊಳಿಸಿದೆ. ಇದರಿಂದಾಗಿ ಸ್ಥಗಿತಗೊಂಡಿದ್ದ ಅಂಚೆ ಮತ್ತು ಹಣಕಾಸು ಸೇವೆಗಳು ಪುನರಾರಂಭಗೊಂಡಿದ್ದು, ಸಾರ್ವಜನಿಕರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗಿದೆ.
ಇದನ್ನೂ ಓದಿ:
ಸಮಸ್ಯೆಗೆ ಕ್ಷಿಪ್ರವಾಗಿ ಸ್ಪಂದಿಸಿ ಸಿಮ್ ಒದಗಿಸಿಕೊಟ್ಟ ಕೇಂದ್ರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಧನ್ಯವಾದ ತಿಳಿಸಿದ್ದಾರೆ.



