ಹೊಸದಿಗಂತ ವರದಿ,ಸುಂಟಿಕೊಪ್ಪ:
ಇಲ್ಲಿಗೆ ಸಮೀಪದ ಪನ್ಯ ತೋಟದ ಮಾರಿಗುಡಿ ಬಳಿಯ ಕಾಫಿ ತೋಟದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತ ದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪನ್ಯದ ಸಂದೇಶ್ ಎಂಬವರಿಗೆ ಸೇರಿದ ಮಾರಿಗುಡಿಯ ಸಮೀಪದ ಕಾಫಿ ತೋಟದಲ್ಲಿ ಮಂಗಳವಾರ ಅಂದಾಜು ವಯಸ್ಸು 45 ರಿಂದ 50 ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬರ ಮೃತ ದೇಹ ಕಂಡು ಬಂದಿದೆ.
ಕಳೆದ 4-5 ದಿನಗಳ ಹಿಂದೆಯೇ ಮೃತದೇಹವನ್ನು ಸುಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಸುಟ್ಟು ಕರಕಲಾದ ಸ್ಥಿತಿಯಲ್ಲಿ, ಮೃತದೇಹದ 1 ಕಾಲು ಇತರೆ ಭಾಗಗಳು ಗೋಚರಿಸಿವೆ.
ತೋಟದ ಮಾಲಕರು ಸುಂಟಿಕೊಪ್ಪ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಮೇರೆಗೆ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಡಿವೈಎಸ್‌ಪಿ ಗಂಗಾಧರಪ್ಪ, ಕುಶಾಲನಗರ ಗ್ರಾಮಾಂತರ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.