ಹೊಸದಿಗಂತ ಡಿಜಿಟಲ್ ಡೆಸ್ಕ್, ಕುಶಾಲನಗರ:
ಕಪ್ಪೆಯನ್ನು ನುಂಗಲು ಬಂದ ನಾಗರಹಾವು ಗಾಳಕ್ಕೆ ಸಿಲುಕಿ ನರಳಾಡಿದ ಘಟನೆ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾರಂಗಿಯಲ್ಲಿ ನಡೆದಿದೆ.
ಹಾರಂಗಿ ಅಯ್ಯಪ್ಪ ದೇವಾಲಯ ಬಳಿಯ ನಿವಾಸಿಯೊಬ್ಬರು ಮೀನು ಹಿಡಿಯಲೆಂದು ಗಾಳಕ್ಕೆ ಕಪ್ಪೆಯನ್ನು ಸಿಕ್ಕಿಸಿ ನದಿಗೆ ಹಾಕಿದ್ದರು. ಆದರೆ ಮೀನು ಸಿಗದ ಕಾರಣ ಕಪ್ಪೆ ಸಹಿತ ಗಾಳವನ್ನು ತಂದು ಮನೆಯಂಗಳದಲ್ಲಿ ಇಟ್ಟಿದ್ದರು.
ಮನೆಯ ಸುತ್ತಮುತ್ತ ಕೆಲ ದಿನಗಳಿಂದ ಅಡ್ಡಾಡುತ್ತಿದ್ದ ನಾಗರಹಾವೊಂದು ಅಪಾಯ ಅರಿಯದೆ ಕಪ್ಪೆಯನ್ನು ನುಂಗಿದ್ದು, ಅದರ ಗಂಟಲಲ್ಲಿ ಗಾಳ ಸಿಲುಕಿಕೊಂಡಿದೆ. ನಾಗರಹಾವು ಒದ್ದಾಡುತ್ತಿರುವುದನ್ನು ಗಮನಿಸಿದ ಮನೆ ಮಾಲೀಕ ನೇಬೂಬು ಸಾಬ್ ಸ್ನೇಕ್ ಗಪೂರ್ ಅವರನ್ನು ಸಂಪರ್ಕಿಸಿದ್ದಾರೆ. ಸ್ಥಳಕ್ಕೆ ತೆರಳಿದ ಗಪೂರ್ ಹಾವಿನ ಬಾಯಿಯಿಂದ ಗಾಳ ತೆಗೆಯಲು ಶ್ರಮಿಸಿದರಾದರೂ ಸಾಧ್ಯವಾಗಲಿಲ್ಲ.
ಸ್ನೇಕ್ ವಾವ ಸೇರಿದಂತೆ ಕೊಡಗಿನ ವೈದ್ಯರುಗಳನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ನೀಡಲಾಗಿ ಹಾವಿಗೆ ಚಿಕಿತ್ಸೆ ನೀಡಲು ಕೊಡಗಿನಲ್ಲಿ ಸೂಕ್ತ ಸೌಲಭ್ಯ ಇಲ್ಲದಿರುವ ಬಗ್ಗೆ ಅಸಹಾಯಕತೆ ವ್ಯಕ್ತಗೊಂಡಿದೆ.
ಬಳಿಕ ಮೈಸೂರಿನ ಸ್ನೇಕ್ ಶ್ಯಾಂ ಅವರನ್ನು ಸಂಪರ್ಕಿಸಿ ಅವರ ಪುತ್ರ ಸೂರ್ಯಕೀರ್ತಿ ಅವರಿಗೆ ವಿಷಯ ತಿಳಿಸಿದ ನಂತರ ಮೈಸೂರಿನಲ್ಲಿ ಚಿಕಿತ್ಸೆಗೆ ಅವಕಾಶವಿರುವುದು ತಿಳಿದುಬಂದಿದೆ. ಹೀಗಾಗಿ 4 ವರ್ಷ ಪ್ರಾಯದ 5 ಅಡಿ ಉದ್ದದ ಈ ನಾಗರಹಾವನ್ನು ಕುಶಾಲನಗರದಿಂದ ಐರಾವತ ಬಸ್’ನಲ್ಲಿ ಮೈಸೂರಿಗೆ ಸ್ನೇಕ್ ಗಪೂರ್ ಕಳುಹಿಸಿಕೊಟ್ಟಿದ್ದಾರೆ.
ಅಲ್ಲಿ ಸೂರ್ಯಕೀರ್ತಿ ಅವರು ಇದಕ್ಕೆ ಚಿಕಿತ್ಸೆ ಒದಗಿಸಲಿರುವ ಬಗ್ಗೆ ಗಪೂರ್ ಮಾಹಿತಿ ನೀಡಿದ್ದು, ಚಿಕಿತ್ಸೆ ಬಳಿಕ ಹಾವು ಚೇತರಿಸಿಕೊಳ್ಳುವುದೇ ಕಾದು ನೋಡಬೇಕಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ