ಹೊಸದಿಗಂತ ಮಡಿಕೇರಿ:
ಮನೆಯ ಸುತ್ತಲಿನ ಕಾಫಿ ತೋಟದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಗಿಡಗಳನ್ನು ಬೆಳೆಸಿರುವ ಪ್ರಕರಣವೊಂದನ್ನು ಪತ್ತೆಹಚ್ಚಿರುವ ಪೊಲೀಸರು ಓರ್ವನನ್ನು ಬಂಧಿಸಿ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.
ಮಡಿಕೇರಿ ತಾಲೂಕಿನ ಎಮ್ಮೆಮಾಡು ಗ್ರಾಮದ ಕನ್ನಡಿಯಂಡ ಎಂ.ಮಹಮ್ಮದ್ (43) ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಆತನಿಂದ 35 ಕೆ.ಜಿ 675 ಗ್ರಾಂ ಹಸಿ ಗಾಂಜಾ (42 ಗಾಂಜಾ ಗಿಡಗಳು ಮತ್ತು 13 ಕಾಂಡಗಳು) ಮತ್ತು 275 ಗ್ರಾಂ ಒಣಗಿದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ಬರುತ್ತಿರುವ ದೂರುಗಳ ಹಿನ್ನೆಲೆಯಲ್ಲಿ, ನಿಷೇಧಿತ ಮಾದಕ ವಸ್ತುಗಳ ಮಾರಾಟ/ಸರಬರಾಜು/ ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೆನ್ ಪೊಲೀಸ್ ಠಾಣೆಯ ಡಿವೈಎಸ್ಪಿ ರವಿ ಮತ್ತು ಸಿಬ್ಬಂದಿಗಳು, ಜಿಲ್ಲಾ ಅಪರಾಧ ಪತ್ತೆ ದಳದ ಇನ್ಸ್‌ಪೆಕ್ಟರ್ ಐ.ಪಿ.ಮೇದಪ್ಪ ಮತ್ತು ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.
ಮಾಹಿತಿ ಸಂಗ್ರಹಿಸಿದ ಈ ತಂಡ, ಎಮ್ಮೆಮಾಡು ಗ್ರಾಮದ ಮಾಂದಲ್ ಅಂಗನವಾಡಿ ಸಮೀಪದ ಮನೆಯ ಸುತ್ತಲಿನ ಕಾಫಿ ತೋಟದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಗಿಡಗಳನ್ನು ಬೆಳೆಸಿರುವ ಕುರಿತು ಖಚಿತ ಮಾಹಿತಿ ಪಡೆದು ದಾಳಿ ನಡೆಸುವುದರೊಂದಿಗೆ ಮಾಲು ಸಹಿತ ಆರೋಪಿಯನ್ನು ಬಂಧಿಸಿದೆ.
ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ ಶ್ಲಾಘಿಸಿದ್ದಾರೆ.