ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಲಿಸುತ್ತಿದ್ದ ಬೈಕ್ಗೆ ಹಸುವೊಂದು ಅಡ್ಡ ಬಂದ ಪರಿಣಾಮ ಬೈಕ್ ಸವಾರ ತೀವ್ರ ಗಾಯಗೊಂಡು, ಹಿಂಬದಿ ಸವಾರ ಮೃತಪಟ್ಟ ಘಟನೆ ಮಳವಳ್ಳಿ ತಾಲೂಕಿನ ಅಂತರವಳ್ಳಿ ಮತ್ತು ದಡಮಹಳ್ಳಿ ಮಾರ್ಗ ಮಧ್ಯೆ ನಡದಿದೆ.
ಹಲಗೂರು ಸಮೀಪದ ಅಪ್ಪಾಜಯ್ಯನದೊಡ್ಡಿ ಗ್ರಾಮದ ನಿವಾಸಿ ಮರಿಸಿದ್ದಯ್ಯ ರವರ ಪುತ್ರ ಈರಸ್ವಾಮಿ (38) ಮೃತ ವ್ಯಕ್ತಿ.
ತೊರೆಕಾಡನಹಳ್ಳಿ ಬಳಿ ಮರಗೆಲಸ ವೃತ್ತಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ಈತ, ಕಾರ್ಯ ನಿಮಿತ್ತ ಹುಲ್ಲಾಗಾಲ ಗ್ರಾಮಕ್ಕೆ ತೆರಳಿ ಹಿಂದುರುಗುತ್ತಿದ್ದಾಗ ಅವಘಡ ಸಂಭವಿಸಿದೆ. ರಸ್ತೆಯ ಪಕ್ಕದಲ್ಲಿರುವ ಹಳ್ಳದಿಂದ ಏಕಾಏಕಿ ಜಿಗಿದು ಬಂದ ಹಸುವೊಂದು ಬೈಕ್ಗೆ ಅಡ್ಡ ಬಂದ ಪರಿಣಾಮ ಬೈಕ್ ಸವಾರ ದಿನುಕುಮಾರ್ ಅಯತಪ್ಪಿ ಕೆಳಗೆ ಬಿದ್ದಿದ್ದಾರೆ.
ಬೈಕ್ನಿಂದ ಬಿದ್ದ ರಭಸಕ್ಕೆ ಹಿಂಬದಿ ಸವಾರ ಎಂ.ಈರಸ್ವಾಮಿ ರವರ ತಲೆಗೆ ತೀವ್ರ ಪೆಟ್ಟಾಗಿದ್ದು, ಮಳವಳ್ಳಿ ತಾಲೋಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಯಿತು. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.