ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ಎಪುರುಪಾಲೆಂ ಕುಗ್ರಾಮವೊಂದರಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಬಾಲಕಿಯರ ಪ್ರೌಢಶಾಲೆ ಬಳಿಯ ಪೊದೆಗಳಲ್ಲಿ 21 ವರ್ಷದ ಯುವತಿಯ ಶವ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಬಾಪಟ್ಲಾ ಜಿಲ್ಲೆಯ ಎಪುರುಪಾಲೆಂ ಗ್ರಾಮದಲ್ಲಿ ಘಟನೆ ನಡೆದಿದ್ದು, ಮಹಿಳೆಯನ್ನು ಹತ್ಯೆಗೈಯುವ ಮುನ್ನ ಅತ್ಯಾಚಾರ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಾಪಟ್ಲಾ ಜಿಲ್ಲೆಯ ಎಪುರುಪಾಲೆಂ ಗ್ರಾಮದ ಯುವತಿ ಮುಂಜಾನೆ 5:30ರ ಸುಮಾರಿಗೆ ನಿತ್ಯಕರ್ಮಗಳನ್ನು ಮುಗಿಸಿ, ರೈಲ್ವೇ ಟ್ರ್ಯಾಕ್‌ಗೆ ಸಮೀಪವಿರುವ ಶಾಲೆಯ ಬಳಿ ಸ್ನಾನಕ್ಕೆ ಹೋಗಿದ್ದು, ಎಷ್ಟು ಸಮಯವಾದರು ಆಕೆ ಮನೆಗೆ ಬಂದಿಲ್ಲ. ಇದರಿಂದ ಕುಟುಂಬದವರು ಭಯಬಿದ್ದಿದ್ದು, ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ.
ಪೊದೆಯ ಬಳಿ ಯುವತಿಯ ಮೃತದೇಹ ಕಂಡು ಪೋಷಕರು ಬೆಚ್ಚಿಬಿದ್ದಿದ್ದಾರೆ. ಮಗಳ ಈ ಸ್ಥಿತಿಗೆ ಮರುಗಿದ್ದು, ಕೊಲೆ ಮಾಡಿದವರಿಗೆ ಹಿಡಿಹಿಡಿ ಶಾಪ ಹಾಕಿದ್ದಾರೆ. ಸದ್ಯ ಪೊಲೀಸರು ಆರೋಪಿಗಳನ್ನು ಹುಡುಕುತ್ತಿದ್ದಾರೆ.