ಅಚ್ಚುಕಟ್ಟಾಗಿ ಶವಸಂಸ್ಕಾರ ನಡೆದ ಬೆನ್ನಿಗೇ ‘ಮೃತ’ ವ್ಯಕ್ತಿ ಮನೆಯಲ್ಲಿ ಹಾಜರ್!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೃತಪಟ್ಟ ವ್ಯಕ್ತಿಗೆ ಸಕಲ ವಿಧಿವಿಧಾನಗಳಲ್ಲಿ ಅಂತ್ಯಕ್ರಿಯೆ ನಡೆದಿದೆ. ಬಂಧುಮಿತ್ರರು ಸೇರಿ ಕಣ್ಣೀರು ಹರಿಸಿದ್ದೂ ಆಗಿದೆ. ಮನೆಮಂದಿ ಶೋಕದ ಛಾಯೆಯಲ್ಲಿ ದಿನಕಳೆಯಲೂ ಅಡ್ಜಸ್ಟ್ ಆಗಿದ್ದಾರೆ. ಹೀಗಿರುವಾಗಲೇ ಮೃತಪಟ್ಟಿದ್ದಾನೆ ಎಂದು ಅಂತ್ಯಕ್ರಿಯೆ ಪೂರೈಸಿಕೊಂಡಿದ್ದ ವ್ಯಕ್ತಿ ಜೀವಂತ ಪ್ರತ್ಯಕ್ಷವಾದರೆ ಮನೆಮಂದಿಯ ಸ್ಥಿತಿ ಹೇಗಿರಬೇಡ?

ಹೀಗೊಂದು ಘಟನೆ ಕೇರಳದಲ್ಲಿ ನಡೆದಿದೆ!

ಅಸಲಿಗೆ ನಡೆದಿರುವುದು ಇಷ್ಟು. ಕರಳದ ಮಂಜತೋಡು ಆದಿವಾಸಿ ಕಾಲನಿಯ 70 ವರ್ಷದ ರಮಣ್ ಬಾಬು ಅಚ್ಚನಕೋವಿಲ್ ದೇವಸ್ಥಾನಕ್ಕೆ ಹಬ್ಬಕ್ಕೆಂದು ತೆರಳಿ ಬಳಿಕ ವಾಪಸ್ ಬಂದಿರಲಿಲ್ಲ. ಈ ನಡುವೆ ನೀಲಕ್ಕಲ್- ಇಲವುಂಗಲ್ ನಡುವಿನ ಅನಂಥರ ಎಂಬಲ್ಲಿ ಕಿವಿಯಲ್ಲಿ ರಕ್ತ ಸೋರುವ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿತ್ತು.

ಪೊಲೀಸ್ ತನಿಖೆಯಲ್ಲಿ ಪತ್ನಿ ಮತ್ತು ಮಕ್ಕಳು ಮೃತದೇಹವನ್ನು ಬಾಬು ಅವರದ್ದು ಎಂದು ಕೂಡಾ ಗುರುತಿಸಿದ್ದರು. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಸಾವಿಗೆ ಹೃದಯಾಘಾತ ಕಾರಣ ಎಂದು ಖಚಿತಪಡಿಸಿಕೊಂಡು ಮನೆಮಂದಿಗೆ ಹಸ್ತಾಂತರಿಸಲಾಗಿತ್ತು .ಇದಾದ ನಂತರ ಕಾಲನಿ ಸಮೀಪದ ಅರಣ್ಯ ಪ್ರದೇಶದಲ್ಲಿ ಮೃತದೇಹದ ಅಂತ್ಯಕ್ರಿಯೆಯನ್ನು ಅಚ್ಚುಕಟ್ಟಾಗಿ ನಡೆಸಲಾಯಿತು.

ಇದೆಲ್ಲಾ ನಡೆದು ಐದೇ ದಿನಗಳಲ್ಲಿ ರಮಣ್ ಬಾಬು ಕೊನ್ನಿ-ಕೊಕತೋಡು ಅರಣ್ಯ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಅವರ ಸಂಬಂಧಿ, ಅರಣ್ಯ ಸಿಬ್ಬಂದಿಯೂ ಆದ ವ್ಯಕ್ತಿಯೊಬ್ಬರು ನೋಡಿ ನೀಲಕ್ಕಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ರಮಣ್‌ರನ್ನು ಠಾಣೆಗೆ ಕರೆತಂದಿದ್ದಾರೆ. ಅಚ್ಚರಿ ಎಂದರೆ ರಮಣ್ ಪತ್ನಿ ಹಾಗೂ ಮಕ್ಕಳು ಇವರನ್ನೂ ಗುರುತಿಸಿದ್ದಾರೆ. ರಮಣ್ ನಗುನಗುತ್ತಾ ಮತ್ತೆ ತನ್ನ ಸಂಸಾರದ ಜೊತೆಗೂಡಿದ್ದಾರೆ.

ಹಾಗಾದರೆ ಈ ಹಿಂದೆ ಸಿಕ್ಕಿದ ಮೃತದೇಹ ಯಾರದ್ದು? ಅಂತ್ಯಕ್ರಿಯೆ ನಡೆಸಿದ್ದು ಯಾರ ಶವವನ್ನು?
ಪೊಲೀಸರು ತಲೆಕೆಡಿಸಿಕೊಳ್ಳುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!