ಕೇಂದ್ರ ಸಚಿವರನ್ನು ಭೇಟಿಯಾಗಿ ರೈತರ ಬೇಡಿಕೆಗಳ ಈಡೇರಿಸಲು ಮನವಿ ಮಾಡಿದ ಬೆಳೆಗಾರರ ಒಕ್ಕೂಟದ ನಿಯೋಗ

ಹೊಸದಿಗಂತ ವರದಿ, ಮಡಿಕೇರಿ:
ಸಂಸತ್ ಅಧಿವೇಶನ ನಡೆಯುತ್ತಿರುವ ಸಂದರ್ಭ ದೆಹಲಿಗೆ ತೆರಳಿದ ಕರ್ನಾಟಕ ಬೆಳೆಗಾರರ ಒಕ್ಕೂಟದ ನಿಯೋಗವು ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವೆ ಹಾಗೂ ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸಂಸತ್ತಿನ ವ್ಯಾವಹಾರಿಕ ಸಚಿವ ಪ್ರಹ್ಲಾದ್ ಜೋಶಿ, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಐ.ಎಂ.ಬಸವೇಗೌಡ, ವಾಣಿಜ್ಯ ಮಂತ್ರಾಲಯದ ಹೆಚ್ಚುವರಿ ಕಾರ್ಯದಶಿ ರಾಜೇಶ್ ಅಗರ್’ವಾಲ್‍ ಅವರುಗಳನ್ನು ಭೇಟಿ ಮಾಡಿ ಕಾಫಿ ಬೆಳೆಗಾರರ ಪ್ರಮುಖವಾದ ಬೇಡಿಕೆಗಳನ್ನು ಸಂಬಂಧಪಟ್ಟ ಸಚಿವರು ಮತ್ತು ಇಲಾಖೆಯ ಪ್ರಮುಖರಿಗೆ ಸಲ್ಲಿಸಿತು.
ಮೂರು ಲಕ್ಷದವರೆಗಿನ ಸಾಲ ಪಡೆದು ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುತ್ತಿರುವ ಬೆಳೆಗಾರರಿಗೆ ಶೂನ್ಯ ಬಡ್ಡಿ ದರದಲ್ಲಿ ಬ್ಯಾಂಕುಗಳಿಂದ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಸಾಲದ ಪ್ರಮಾಣವನ್ನು ಹೆಚ್ಚುಪಡಿಸಬೇಕು. ಕಾಫಿ ಇತರೆ ಸಾಲಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕು. ವಾಣಿಜ್ಯ ಬ್ಯಾಂಕ್‍ನಿಂದ ಕಾಫಿ ಸಾಲಕ್ಕೆ ಬ್ಯಾಂಕ್ ಬಡ್ಡಿ ದರವನ್ನು ಕಡಿಮೆ ಮಾಡಬೇಕು. ಬ್ಯಾಂಕ್ ಸಾಲ ಮರುಪಾವತಿ ಅವಧಿಯನ್ನು ಹೆಚ್ಚಿಸಬೇಕು. ಕೃಷಿಯಲ್ಲೇ ತೊಡಗಿಸಿಕೊಂಡಿರುವ ರೈತರಿಗೆ ಸಿಬಿಲ್‍ನ್ನು ಅನ್ವಯಿಸಬಾರದು ಎಂದು ಒತ್ತಾಯಿಸಿತು.
ಕಾಳುಮೆಣಸು, ಅಡಿಕೆಗೆ ಇರುವಂತೆ ಕಾಫಿಗೂ ಸಹ ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಅಳವಡಿಸಬೇಕು. ಕೇಂದ್ರ ಸರ್ಕಾರದಿಂದ ಮಾನವ-ಪ್ರಾಣಿ ಸಂಘರ್ಷಕ್ಕೆ ಬಜೆಟ್’ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಹೆಚ್ಚು ಅನುದಾನವನ್ನು ನೀಡಬೇಕು. ಇದರಿಂದ ಮಾನವ-ಪ್ರಾಣಿ ಸಂಘರ್ಷವನ್ನು ಯಶಸ್ವಿಯಾಗಿ ತಡೆಗಟ್ಟಲು ಸಹಾಯವಾಗುತ್ತದೆ ಎಂದು ಗಮನಸೆಳೆಯಿತು.
ಪರಿಹಾರ ಮೊತ್ತ ಹೆಚ್ಚಿಸಿ: ರಾಷ್ಟ್ರೀಯ ವಿಪತ್ತು ಯೋಜನೆ (ಎನ್.ಡಿ.ಆರ್.ಎಫ್.)ಯಿಂದ ಕೊಡುತ್ತಿರುವ ಪರಿಹಾರವನ್ನು 10 ಹೆಕ್ಟೇರ್’ವರೆಗೆ ವಿಸ್ತರಿಸಬೇಕು ಮತ್ತು ಪರಿಹಾರ ಮೊತ್ತವನ್ನು ಹೆಚ್ಚುಪಡಿಸಬೇಕು ಎಂದೂ ಆಗ್ರಹಿಸಿತು.
ಕರ್ನಾಟಕ ಬೆಳೆಗಾರರ ಒಕ್ಕೂಟದ ನಿಯೋಗದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಹೆಚ್.ಟಿ. ಮೋಹನ್‍ಕುಮಾರ್, ಸಂಘಟನಾ ಕಾರ್ಯದರ್ಶಿ ಕೆ.ಕೆ. ವಿಶ್ವನಾಥ್ ಇದ್ದರು ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಚ್.ಬಿ. ಕೃಷ್ಣಪ್ಪ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!