ಹೊಸದಿಗಂತ ವರದಿ, ದಾವಣಗೆರೆ:
ಹೆಜ್ಜೇನು ದಾಳಿಯಿಂದ ರೈತನೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಗ್ರಾಮದ ನಾಗಪ್ಪ (64) ಹೆಜ್ಜೇನು ದಾಳಿಯಿಂದ ಮೃತಪಟ್ಟ ರೈತ. ಎಂದಿನಂತೆ ಬೆಳಗ್ಗೆ ಜಮೀನಿಗೆ ತೆರಳುತ್ತಿದ್ದಾಗ ಏಕಾಏಕಿ ಹೆಜ್ಜೇನು ಹುಳುಗಳು ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡು ಅಸ್ವಸ್ಥಗೊಂಡಿದ್ದ ರೈತನನ್ನು ಕೂಡಲೇ ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ರೈತ ಕೊನೆಯುಸಿರೆಳೆದಿದ್ದಾರೆ. ಮೃತ ರೈತನಿಗೆ ಪತ್ನಿ, ಮೂವರು ಪುತ್ರರು, ಪುತ್ರಿ ಇದ್ದಾರೆ. ಈ ಕುರಿತು ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಮೃತ ರೈತನ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಬಳಿಕ ಚಿಗಟೇರಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.