ಹೊಸದಿಗಂತ ವರದಿ, ಮಂಡ್ಯ :
ಸಾಲಬಾಧೆ ತಾಳಲಾರದೆ ರೈತನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಸುಂಕಾತೊಣ್ಣೂರು ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ಗ್ರಾಮದ ರೈತ ಸೋಮಶೇಖರ್(35) ಮೃತ ವ್ಯಕ್ತಿ. ಮೃತ ರೈತ ಸೋಮಶೇಖರ್ ಅವರ ತಂದೆ ನಿಂಗೇಗೌಡ ಅವರಿಗೆ ಐವರು ಗಂಡುಮಕ್ಕಳಿದ್ದು ಇವರ ಹೆಸರಿಯಲ್ಲಿ 30 ಗುಂಟೆ ಜಮೀನಿದೆ. ಮೃತ ಸೋಮಶೇಖರ್ ಕೊನೆಯ ಮಗನಾಗಿದ್ದು ಅವಿವಾಹಿತನಾಗಿದ್ದ, ಕೃಷಿ ಬೇಸಾಯಕ್ಕಾಗಿ ಕೃಷಿಪತ್ತಿನ ಸಹಕಾರ ಸಂಘ, ಸೇರಿದಂತೆ ವಿವಿಧ ಬ್ಯಾಂಕ್‌ಗಳಲ್ಲಿ ಲಕ್ಷಾಂತ ರೂ.ಸಾಲ ಸೇರಿದಂತೆ ಸಾಕಷ್ಟು ಕೈಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಅಲ್ಲದೆ ಖಾಸಗಿ ಕಂಪನಿಯಿಂದ ಸಾಲದ ಮೇಲೆ ಟ್ರ್ಯಾಕ್ಟರ್ ಸಹ ಖರೀದಿಸಿದ್ದರು.
ಕೃಷಿಯ ಜತೆಗೆ ಟ್ರ್ಯಾಕ್ಟರ್ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಸಾಲಗಾರರ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಒತ್ತಡ ತಾಳಲಾಗದೆ ಮಂಗಳವಾರ ಬೆಳಿಗ್ಗೆ ಗ್ರಾಮದ ಹೊರವಲಯದ ಜಮೀನಿ ಬಳಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಕ್ಕಪಕ್ಕದ ಜಮೀನಿನರು ನೋಡಿ ಕುಟುಂಬಸ್ಥರಿಗೆ ಮಾಹಿತಿ ಮುಟ್ಟಿಸಿದ್ದಾರೆ. ವಿಷಯ ತಿಳಿದ ಮೇಲುಕೋಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಮೃತದೇಹವನ್ನು ಪಾಂಡವಪುರ ಪಟ್ಟಣದ ಶವಗಾರಕ್ಕೆ ರವಾನಿಸಿ ಶವಪರೀಕ್ಷೆ ನಡೆಸಿ ವಾರಸ್ಸುದಾರರಿಗೆ ಒಪ್ಪಿಸಿದರು.