ಹೊಸದಿಗಂತ ಮಂಗಳೂರು:
ರಸ್ತೆ ಬದಿ ನಿಲ್ಲಿಸಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಗುರುವಾರ ರಾತ್ರಿ ನಡೆದಿದೆ.
ಕಾರಿನಲ್ಲಿ ಇಬ್ಬರಿದ್ದು ಅವರು ಸಂಭಾವ್ಯ ಅಪಾಯದಿಂದ ಪಾರಾಗಿದ್ದಾರೆ. ಮಣಿಪಾಲದ ಬಬ್ಬುಸ್ವಾಮಿ ದೈವಸ್ಥಾನದ ಎದುರು ರಸ್ತೆ ಬದಿಯಲ್ಲಿ ಇಬ್ಬರು ಕಾರು ನಿಲ್ಲಿಸಿ ನಿದ್ರೆಗೆ ಜಾರಿದ್ದರು. ಈ ಸಂದರ್ಭ ಕಾರಿನ ಬಾನೆಟ್‌ನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ಹತ್ತಿಕೊಂಡಿದೆ.
ಕಾರಿನಲ್ಲಿದ್ದವರು ತಕ್ಷಣ ಹೊರಕ್ಕೆ ಬಂದು ಬೆಂಕಿ ನಂದಿಸುವ ಪ್ರಯತ್ನ ಮಾಡಿದರಾದರೂ ಬೆಂಕಿಯ ಕೆನ್ನಾಲಿಗೆಗೆ ಪ್ರಯತ್ನ ಫಲನೀಡಿಲ್ಲ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿಬಂದು ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಕಾರು ಭಾಗಶಃ ಸುಟ್ಟುಹೋಗಿದೆ.