ಇದು ದೇಶದಲ್ಲೇ ಮೊದಲು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ವೈಮಾನಿಕ ವೀಕ್ಷಣೆ ವ್ಯವಸ್ಥೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಗಮ ಕಾರ್ಯಾಚರಣೆ ಹಾಗೂ ವಾಯುಯಾನ ಪ್ರದೇಶದಲ್ಲಿನ ತುರ್ತು ಪ್ರತಿಕ್ರಿಯೆಯ ದಕ್ಷತೆಯನ್ನು ಹೆಚ್ಚಿಸಲು ವೈಮಾನಿಕ ವೀಕ್ಷಣೆ ಪ್ರದರ್ಶನ (ಎವಿಡಿ- Aerial View Display System) ಎಂಬ ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಇದು ದೇಶದಲ್ಲೇ ಮೊದಲು ಆಗಿದೆ.

ಈ ವ್ಯವಸ್ಥೆಯು ವಿಮಾನಗಳ ಸಂಚಾರ, ವಾಯುಯಾನ ಪ್ರದೇಶದಲ್ಲಿ ವಾಹನಗಳ ಚಲನೆಯ ಸಮನ್ವಯ, ತುರ್ತು ಪರಿಸ್ಥಿತಿಯ ನಿರ್ವಹಣೆಗಳನ್ನು ಕೇಂದ್ರೀಕೃತ ಡ್ಯಾಶ್ಬೋರ್ಡ್ ನಲ್ಲಿ ಮೇಲ್ವಿಚಾರಣೆ ಮಾಡಲು ಅನುವು ಮಾಡಿಕೊಡುತ್ತದೆ.

ಎವಿಡಿ ವ್ಯವಸ್ಥೆಯು ವಿಮಾನ ನಿಲ್ದಾಣದ ನಿರ್ವಾಹಕರು, ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳಿಗೆ ವಾಯುಯಾನ ಪ್ರದೇಶದಲ್ಲಿ ನಡೆಯುವ ಎಲ್ಲ ಚಟುವಟಿಕೆಗಳ ಏಕೀಕೃತ ನೋಟವನ್ನು ಒದಗಿಸುವ ಮೂಲಕ, ವಿಮಾನ ಕಾರ್ಯಾಚರಣೆಯ ದಕ್ಷತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಸಹಕರಿಸುತ್ತದೆ. ಈವರೆಗೆ ಬಳಕೆಯಲ್ಲಿದ್ದ ವಾಯು ಸಂಚಾರ ನಿಯಂತ್ರಣ ಕೇಂದ್ರವನ್ನು ಸಂಪರ್ಕಿಸಿ ವಿಮಾನಗಳನ್ನು ಗುರುತಿಸುತ್ತಿದ್ದ ಸಾಂಪ್ರದಾಯಿಕ ವ್ಯವಸ್ಥೆಯನ್ನು ಸರಳಗೊಳಿಸಿ, ವಿಮಾನಗಳನ್ನು ಅವುಗಳ ಸಂಖ್ಯೆಗಳ ಮೂಲಕ ಗುರುತಿಸುವ ಸೌಲಭ್ಯವನ್ನು ಈ ವ್ಯವಸ್ಥೆ ಒದಗಿಸುತ್ತದೆ.

ಎವಿಡಿ ವ್ಯವಸ್ಥೆಯ ವೈಶಿಷ್ಟ್ಯತೆ:

ನೈಜ-ಸಮಯದ ಏಕೀಕೃತ ಡ್ಯಾಶ್‌ಬೋರ್ಡ್: ವಿಮಾನ ಬಂದಿಳಿಯುವಿಕೆ ಮತ್ತು ಟೇಕ್ ಆಫ್, ಟ್ಯಾಕ್ಸಿ ಮತ್ತು ವಾಹನ ಸಂಚಾರ ಸೇರಿದಂತೆ ವಾಯುಯಾನ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ನೈಜ ಸಮಯದ ವಿವರಗಳನ್ನು ಒಂದೇ ವೇದಿಕೆಯಲ್ಲಿ ನೀಡಲಿದೆ.
ಸುಧಾರಿತ ವಿಮಾನ ಟ್ರ್ಯಾಕಿಂಗ್ ಸೌಲಭ್ಯ: ವಾಯುಯಾನ ಪ್ರದೇಶದ ದಕ್ಷತೆಯನ್ನು ಹೆಚ್ಚಿಸಲು ವಿಮಾನಗಳ ವೇಗ, ರನ್‌ವೇ ಬಳಕೆಯಲ್ಲಿರುವ ಸಮಯ ಮತ್ತು ಟ್ಯಾಕ್ಸಿಗಳ ಸಂಚಾರದ ನಿಖರ ಮೇಲ್ವಿಚಾರಣೆ ಮಾಡಬಹುದಾಗಿದೆ.
ರಸ್ತೆ ವಾಹನಗಳ ಮೇಲ್ವಿಚಾರಣೆ: ರನ್‌ವೇಯಲ್ಲಿ ತಡೆರಹಿತ ಸಮನ್ವಯ ಮತ್ತು ಸುರಕ್ಷತೆಯ ಹೆಚ್ಚಳಕ್ಕಾಗಿ ವಿಮಾನೇತರ ವಾಹನಗಳ ನೈಜ ಸಮಯದ ಟ್ರ್ಯಾಕಿಂಗ್ ಮಾಡಲಾಗುತ್ತದೆ.
ಇತರ ಸಂಸ್ಥೆಗಳ ಸಹಯೋಗ: ವಾಯುಯಾನ ಪ್ರದೇಶದ ಕಾರ್ಯಾಚರಣೆಯಲ್ಲಿ ಇತರ ಸಂಸ್ಥೆ/ತಂಡಗಳ ಸಹಯೋಗವನ್ನು ಇನ್ನಷ್ಟು ಬಲಗೊಳಿಸಲು ಮತ್ತು ಕಾರ್ಯಾಚರಣೆಯ ಯೋಜನೆಯನ್ನು ಉತ್ತಮಗೊಳಿಸಲು ಅಗತ್ಯ ಸೌಲಭ್ಯವನ್ನು ನೀಡುತ್ತದೆ.
ತುರ್ತು ಎಚ್ಚರಿಕೆ: ತುರ್ತು ಸಂದರ್ಭಗಳಲ್ಲಿ ಇತರ ಸಂಸ್ಥೆ/ತಂಡಗಳ ಜೊತೆಗೆ ಉತ್ತಮ ಸಮನ್ವಯ ಸಾಧಿಸಲು, ಅಪಾಯ ಮತ್ತು ಅಡೆತಡೆಯನ್ನು ಕಡಿಮೆ ಮಾಡಲು ತ್ವರಿತ ಪ್ರತಿಕ್ರಿಯೆ ಪಡೆಯುವ ಸೌಲಭ್ಯವನ್ನು ಒದಗಿಸುತ್ತದೆ.
ಟ್ಯಾಕ್ಸಿ ಸಂಚಾರ ಸಮಯದ ಸೂಕ್ತ ನಿರ್ವಹಣೆ: ಟ್ಯಾಕ್ಸಿ ಸಂಚಾರ ಸಮಯದ ವಿಳಂಬವನ್ನು ಕಡಿಮೆ ಮಾಡಲು ಮತ್ತು ಸುಗಮ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ನಿಖರ ವಿಶ್ಲೇಷಣೆಯನ್ನು ಒದಗಿಸುತ್ತದೆ. ಇದು ಸರಿಯಾದ ಸಮಯದ ಕಾರ್ಯಕ್ಷಮತೆ (ಒಟಿಪಿ) ಮತ್ತು ಇಂಧನ ಉಳಿತಾಯಕ್ಕೆ ಕಾರಣವಾಗುತ್ತದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!