ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷದ ಕೊನೆ ಹಾಗೂ ಕ್ರಿಸ್‌ಮಸ್ ರಜೆಗಳ ಹಿನ್ನೆಲೆಯಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಹಿಂದೆಂದೂ ಕಾಣದ ರೀತಿಯಲ್ಲಿ ಭಕ್ತರ ದಂಡು ಹರಿದುಬಂದಿದೆ. ರಜಾ ದಿನಗಳ ಜೊತೆಗೆ ಗುರುರಾಯರ ವಾರವೂ ಸೇರಿಕೊಂಡಿರುವುದು ಭಕ್ತರ ಸಂಖ್ಯೆ ದುಪ್ಪಟ್ಟಾಗಲು ಕಾರಣವಾಗಿದೆ.
ಒಂದೇ ದಿನ ಲಕ್ಷಾಂತರ ಮಂದಿ ಭಕ್ತರು ಮಠಕ್ಕೆ ಆಗಮಿಸಿದ್ದರಿಂದ, ಎಲ್ಲರಿಗೂ ದರ್ಶನದ ವ್ಯವಸ್ಥೆ ಕಲ್ಪಿಸಲು ಮಠದ ಆಡಳಿತ ಮಂಡಳಿ ಹರಸಾಹಸ ಪಡುತ್ತಿದೆ. ಭಕ್ತರ ಅನುಕೂಲಕ್ಕಾಗಿ ಬೃಂದಾವನ ದರ್ಶನದ ಎಲ್ಲಾ ಪ್ರವೇಶ ದ್ವಾರಗಳನ್ನು ಮುಕ್ತಗೊಳಿಸಲಾಗಿದೆ. ಆದರೂ ದರ್ಶನಕ್ಕಾಗಿ ಭಕ್ತರು ಗಂಟೆಗಟ್ಟಲೆ ಸರದಿಯಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಭಕ್ತರ ಅನಿರೀಕ್ಷಿತ ಸಂಖ್ಯೆಯಿಂದಾಗಿ ಮಂತ್ರಾಲಯದಲ್ಲಿ ವಸತಿ ಸಮಸ್ಯೆ ತಲೆದೂರಿದೆ. ಈಗಾಗಲೇ ಮಠದ ಎಲ್ಲಾ ವಸತಿಗೃಹಗಳು ಭರ್ತಿಯಾಗಿದ್ದು, ಡಿಸೆಂಬರ್ 23ರಿಂದ 2026ರ ಜನವರಿ 15ರವರೆಗೆ ಯಾವುದೇ ರೂಮ್‌ಗಳು ಲಭ್ಯವಿರುವುದಿಲ್ಲ ಎಂದು ಮಠದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಮುಂಗಡ ಬುಕ್ಕಿಂಗ್ ಮಾಡದೆ ಬಂದ ಬೆಂಗಳೂರು ಸೇರಿದಂತೆ ವಿವಿಧ ನಗರಗಳ ನೂರಾರು ಭಕ್ತರು ತಂಗಲು ಜಾಗವಿಲ್ಲದೆ ಪರದಾಡುವಂತಾಗಿದೆ.

