October 8, 2026
Thursday, October 8, 2026
spot_img

ಟೆಸ್ಟ್ ಕ್ರಿಕೆಟ್‌ಗೆ ಹೊಸ ಮೆರುಗು: WTC ಮಹಾಸಮರಕ್ಕೆ 12 ತಂಡಗಳ ಗ್ರಾಂಡ್ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅತ್ಯಂತ ಸುದೀರ್ಘ ಮಾದರಿಯಾದ ರೆಡ್-ಬಾಲ್ ಕ್ರಿಕೆಟ್‌ಗೆ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಜೀವ ತುಂಬಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐತಿಹಾಸಿಕ ಯೋಜನೆಯೊಂದನ್ನು ರೂಪಿಸಿದೆ. 2029–2031ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯಲ್ಲಿ ಒಟ್ಟು 12 ತಂಡಗಳನ್ನು ಕಣಕ್ಕಿಳಿಸಲು ಪ್ಲಾನ್ ಸಿದ್ಧವಾಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಸದ್ಯ ಚಾಲ್ತಿಯಲ್ಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 9 ತಂಡಗಳು ಮಾತ್ರ ಭಾಗವಹಿಸುತ್ತಿವೆ. ಆದರೆ 2029ರ ಆವೃತ್ತಿಯಿಂದ ಐಸಿಸಿಯ ಉಳಿದ ಮೂರು ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರಗಳಾದ ಝಿಂಬಾಬ್ವೆ, ಐರ್ಲೆಂಡ್ ಮತ್ತು ಅಫ್ಘಾನಿಸ್ತಾನ್ ತಂಡಗಳು ಅಧಿಕೃತವಾಗಿ ಲಗ್ಗೆ ಇಡಲಿವೆ. ಇದರಿಂದಾಗಿ ಟೆಸ್ಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಎಲ್ಲಾ 12 ಪೂರ್ಣ ಸದಸ್ಯ ರಾಷ್ಟ್ರಗಳು ಒಂದೇ ಚಾಂಪಿಯನ್‌ಶಿಪ್‌ಗಾಗಿ ಸೆಣಸಾಡಲಿವೆ.

ಆರಂಭದಲ್ಲಿ ದುರ್ಬಲ ಹಾಗೂ ಸಣ್ಣ ತಂಡಗಳನ್ನು ಕೆಳಗಿನ ವಿಭಾಗದಲ್ಲಿಟ್ಟು ಟೂ-ಟೈರ್ ವ್ಯವಸ್ಥೆ ಮಾಡಲು ಯೋಚಿಸಲಾಗಿತ್ತು. ಆದರೆ ಈ ಸಣ್ಣ ರಾಷ್ಟ್ರಗಳ ಆದಾಯ ಮತ್ತು ದೊಡ್ಡ ತಂಡಗಳ ವಿರುದ್ಧ ಆಡುವ ಅವಕಾಶ ಕೈತಪ್ಪುತ್ತದೆ ಎಂಬ ಕಾರಣಕ್ಕೆ ಈ ಪ್ರಸ್ತಾಪವನ್ನು ಕೈಬಿಡಲಾಗಿದೆ. ಹೊಸ ನಿಯಮದಂತೆ ಎಲ್ಲಾ 12 ತಂಡಗಳು ಒಂದೇ ಸಿಂಗಲ್ ಡಿವಿಷನ್‌ನಲ್ಲಿ ಮುಂದುವರಿಯಲಿವೆ.

ಪ್ರಸ್ತುತ ನಿಯಮಗಳ ಪ್ರಕಾರ WTC ಅಂಕಪಟ್ಟಿಗೆ ಪರಿಗಣಿಸಲು ಕನಿಷ್ಠ 2 ಪಂದ್ಯಗಳ ಸರಣಿಯನ್ನು ಆಡುವುದು ಕಡ್ಡಾಯವಾಗಿದೆ. ಆದರೆ ಸಣ್ಣ ದೇಶಗಳಿಗೆ ದೀರ್ಘಾವಧಿಯ ಸರಣಿಗಳನ್ನು ಆಯೋಜಿಸುವುದು ಆರ್ಥಿಕವಾಗಿ ಕಷ್ಟಕರವಾಗಿದೆ. ಇದನ್ನು ಮನಗಂಡಿರುವ ಐಸಿಸಿ, 2029ರ ಆವೃತ್ತಿಯಿಂದ ಒಂದೇ ಒಂದು ಪಂದ್ಯದ ಟೆಸ್ಟ್ ಸರಣಿ ಆಡಿದರೂ ಅದಕ್ಕೆ WTC ಪಾಯಿಂಟ್ಸ್ ನೀಡಲು ಗಂಭೀರವಾಗಿ ಪರಿಶೀಲಿಸುತ್ತಿದೆ.

ಈ ಯೋಜನೆಗೆ ಮುಂಬರುವ ಐಸಿಸಿ ವಾರ್ಷಿಕ ಸಭೆಯಲ್ಲಿ ಅಧಿಕೃತ ಅಂತಿಮ ಮುದ್ರೆ ಬೀಳುವ ನಿರೀಕ್ಷೆಯಿದೆ. ಈ ವಿಸ್ತರಣೆಯು ಕೇವಲ ತಂಡಗಳ ಸಂಖ್ಯೆಯನ್ನು ಹೆಚ್ಚಿಸುವ ನಿರ್ಧಾರವಲ್ಲ, ಬದಲಿಗೆ ಟೆಸ್ಟ್ ಕ್ರಿಕೆಟ್‌ನ ಅಸ್ತಿತ್ವವನ್ನು ಉಳಿಸಿ ಬೆಳೆಸುವ ದೃಢ ಹೆಜ್ಜೆಯಾಗಿದೆ.

Must Read