ಹೊಸದಿಗಂತ ವರದಿ ಹಾವೇರಿ :
ಕಳೆದ 15ದಿನಗಳಿಂದ ಸುರಿಯುತ್ತಿರುವ ಮಳೆ ಅವಾಂತರವನ್ನೇ ಸೃಷ್ಠಿಸಿದೆ. ಗುರುವಾರ ಬೆಳಗಿನ ಜಾವ ಸುರಿದ ಭಾರಿ ಮಳೆಗೆ ದೊಡ್ಡ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಈ ನೀರಿನ ಸೆಳವಿಗೆ ಸಿಲುಕಿ ಬಾಲಕನೋರ್ವ ಸುಮಾರು 20 ಮೀಟರ್ ದೂರ ಕೊಚ್ಚಿ ಹೋಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಆತ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ.
ಕೊಚ್ಚಿಹೋಗಿ ಬಚಾವಾದ ಬಾಲಕನನ್ನು ಶಿವಾಜಿ ನಗರ ಒಂದನೇ ಕ್ರಾಸ್ ನಿವಾಸಿ ವೇದು ಗುಡಗೇರಿ (11) ಎನ್ನಲಾಗಿದೆ. ಹೊಸ ಎಸ್ಪಿ ಕಚೇರಿ ಎದುರು ಈ ದುರ್ಘಟನೆ ನಡೆದಿದ್ದು, ಹಳೆ ಪಿ.ಬಿ. ರಸ್ತೆಯ ಎರಡು ರಸ್ತೆಗಳ ಮೇಲೆ ಭಾರಿ ಪ್ರಮಾಣದಲ್ಲಿ ನೀರು ನದಿಯಂತೆ ಹರಿಯುತ್ತಿದೆ. ಹರಿವ ನೀರಿನ ಸೆಳೆತಕ್ಕೆ ಸಿಲುಕಿ ಈ ಬಾಲಕ ಕೊಚ್ಚಿ ಹೋಗಿ, ಸಿನಿಮೀಯ ರೀತಿಯಲ್ಲಿ ಬಚಾವಾಗಿದ್ದ. ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನವರ, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ನಗರಸಭೆ ಸದಸ್ಯ ಪ್ರಸನ್ನ ಧಾರವಾಡ ಸೇರಿದಂತೆ ಹಲವರು ಧಾವಿಸಿದ್ದು, ಪರಿಶೀಲಿಸುತ್ತಿದ್ದಾರೆ. ಸ್ಥಳದಲ್ಲಿ ಸಾವಿರಾರು ಜನ ನೆರೆದಿದ್ದಾರೆ. ರಸ್ತೆ ಸಂಚಾರ ಬಂದ್ ಆಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಎಡಬಿಡದೆ ಸುರಿದ ಭಾರಿಮಳೆಗೆ ನೀರು ತಗ್ಗು ಪ್ರದೇಶಗಳ ಮನೆಗಳಿಗೆ ನುಗ್ಗಿದ್ದು ಮನೆಗಳಿಗೆ ತೀವ್ರಹಾನಿ ಸಂಭವಿಸಿದೆ. ಅಲ್ಲದೇ ಹಾನಗಲ್ಲ ರಸ್ತೆಯ ಎಪಿಎಂಸಿ ಎದುರು ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು ಈ ಭಾಗದ ಜನರು ಆತಂಕಕ್ಕೆ ಸಿಲುಕಿದ್ದಾರೆ. ಈ ಕುರಿತು ಜನಪ್ರತಿನಿಧಿಗಳು ಮತ್ತು ನಗರಸಭೆ ಅಧಿಕಾರಿಗಳ ವಿರುದ್ಧ ಅಸಮರ್ಪಕ ಯೋಜನೆ ಮತ್ತು ಅನುಷ್ಠಾನದಲ್ಲಿನ ವಿಫಲತೆ ಖಂಡಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.