ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೋವಾ-ಬೆಳಗಾವಿ-ಕಾರವಾರ ಗಡಿ ಭಾಗದಲ್ಲಿ ಕಲ್ಲಿದ್ದಲು ತುಂಬಿಕೊಂಡು ತೆರಳುತ್ತಿದ್ದ ಗೂಡ್ಸ್ ರೈಲು ಹಳಿತಪ್ಪಿ ಬಿದ್ದಿದೆ.
ಲೋಂಧ ವಾಸ್ಕೋ ರೈಲು ಮಾರ್ಗದ ದೂದ್ ಸಾಗರ್‌ನಿಂದ ಸೋನಾಲಿಂ ನಡುವಿನ ಸುರಂಗ ಸಂಖ್ಯೆ 15 ರ ಸಮೀಪ ಈ ಘಟನೆ ನಡೆದಿದೆ. ವಾಸ್ಕೋದಿಂದ ಹೊಸಪೇಟೆಯಲ್ಲಿ ಜಿಂದಾಲ್ ಕಂಪನಿಗೆ ಗೂಡ್ಸ್ ರೈಲಿನಲ್ಲಿ ಕಲ್ಲಿದ್ದಲು ಸಾಗಿಸಲಾಗುತ್ತಿತ್ತು. ಸದ್ಯ ರೈಲಿನಲ್ಲಿದ್ದ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶುಕ್ರವಾರ ಬೆಳಗ್ಗೆ 9:30ರ ವೇಳೆಗೆ ಈ ಘಟನೆ ನಡೆದಿದೆ. ಒಂದು ಕಾರ್ಗೋ ಕೋಚ್, 11 ಬೋಗಿಗಳು ರೈಲ್ವೇ ಹಳಿಯಿಂದ ಜಾರಿಬಿದ್ದು, ರೈಲು ಹಳಿ ಮುರಿದು ಬಿದ್ದಿದೆ.
ಈ ಮಾರ್ಗದ ರೈಲು ಸಂಖ್ಯೆ 17309 ಯಶವಂತಪುರ ದಿಂದ ವಾಸ್ಕೋಡಿ ಹಾಗೂ 17310 ವಾಸ್ಕೋಡಿಯಿಂದ ಯಶವಂತಪುರಕ್ಕೆ ಹೋಗುವ ಎರಡು ರೈಲುಗಳು ರದ್ದು ಮಾಡಲಾಗಿದೆ. ಇಂದು ಸಂಜೆ ತೆರಳುವ ಗೋವಾ ಎಕ್ಸ್‌ಪ್ರೆಸ್ ರೈಲನ್ನು ಇತರೇ ಮಾರ್ಗದಲ್ಲಿ ತಿರುಗಿಸಲಾಗುವುದು ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.