ದಿಗಂತ ವರದಿ ಮಂಡ್ಯ:
ಕಾವೇರಿ ಮಡಿಲಲ್ಲಿ ಮೂರನೇ ಬಾರಿಗೆ ನಡೆಯುತ್ತಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ಅದ್ಧೂರಿ ಚಾಲನೆ ದೊರೆತ್ತಿದ್ದು, ಸಕ್ಕರೆ ನಾಡಿನಲ್ಲಿ ಕನ್ನಡ ಕಂಪು ಹರಡುವಂತಾಗಿದೆ.
ಇಲ್ಲಿನ ಸರ್.ಎಂ. ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗದಿಂದ, ಸಾಲಂಕೃತ ಸಾರೋಟಿನಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ, ನಾಡೋಜ ಡಾ.ಗೊ.ರು. ಚನ್ನಬಸಪ್ಪನವರನ್ನು ಮೆರವಣಿಗೆ ಮೂಲಕ, ಮೈಸೂರು- ಬೆಂಗಳೂರು ರಸ್ತೆ ಮಾರ್ಗದ ಮೂಲಕ ಸಮ್ಮೇಳನ ನಡೆಯುತ್ತಿರುವ ಸ್ಯಾಂಜೋ ಆಸ್ಪತ್ರೆ ಹಿಂಭಾದ ಸಮ್ಮೇಳನದ ಮಂಟಪದ ವರೆಗೆ ಕರೆತರಲಾಗುತ್ತಿದೆ.
ಸಾಲಂಕೃತ ಸಾರೋಟಿನಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ, ನಾಡೋಜ ಡಾ.ಗೊ.ರು. ಚನ್ನಬಸಪ್ಪನವರು ಆಸಿನರಾಗಿದ್ದರೆ, ಮುಂಭಾಗದಲ್ಲಿ ವೀರಗಾಸೆ, ಡೊಳ್ಳು ಕುಣಿತ, ಚಿಟ್ಟಿಮೇಳ, ಪುಸ್ತಕ ಮೆರವಣಿಗೆ, ಪೂರ್ಣಕುಂಭ, ಕೋಲಾಟ, ಕಂಸಾಳೆ, ಸೋಮನ ಕುಣಿತ, ತಮಟೆ, ಕೊಂಬು ಕಹಳೆ, ಸಾಂಪ್ರದಾಯಿಕ ಎತ್ತಿನ ಬಂಡಿ, ಕುದುರೆ ಟಾಂಗಾ, ಮಹಾಪುರುಷರ ಛದ್ಮವೇಷಧಾರಿಗಳು ಸೇರಿದಂತೆ ಪೊಲೀಸ್ ಬ್ಯಾಂಡ್ ಕಲರವ ಮೊಳಗುತ್ತಿದೆ.
ಎಲ್ಲೆಡೆಯೂ ಹಳದಿ, ಕೆಂಪು ಬಾವುಟ, ಶಲ್ಯ, ತೋರಣಗಳೇ ಕಂಗೊಳಿಸುತ್ತಿದ್ದು, ಮೆರವಣಿಗೆಯುದ್ದಕ್ಕೂ ಜನರು ಸಂಭ್ರಮದಿಂದ ಹೆಜ್ಜೆ ಹಾಕುತ್ತಿದ್ದಾರೆ. ಅಷ್ಟದಿಕ್ಕುಗಳಿಂದ ಕನ್ನಡಮ್ಮ ಜಯಘೋಷ ಮೊಳಗುತ್ತಿದ್ದು, ಕನ್ನಡ ನಾಡು, ನುಡಿ ಅಭಿಮಾನ ಮುಗಿಲು ಮುಟ್ಟುವಂತಾಗಿದೆ.