ದಿಗಂತ ವರದಿ ಬೆಳಗಾವಿ:
ರಾಜ್ಯವಷ್ಟೇ ಅಲ್ಲ ಇಡೀ ದೇಶವನ್ನು ತಲ್ಲಣಗೊಳಿಸಿದ್ದ ಇಲ್ಲಿನ ಹೊಸವಂಟಮೂರಿ ಗ್ರಾಮದಲ್ಲಿನ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಆರೋಪಿಗಳು ಜೈಲಿನಿಂದ ಬಿಡುಗಡೆ ಆಗಿದ್ದು, ಯುದ್ಧ ಗೆದ್ದು ಬಂದವರಂತೆ ಅರೋಪಿಗಳಿಗೆ ಅದ್ದೂರಿ ಸ್ವಾಗತ ನೀಡಿರುವುದು ಇಡೀ ವ್ಯವಸ್ಥೆಯನ್ನೇ ಅಣಕಿಸುವಂತಾಗಿದೆ.
ಇಡೀ ಸರಕಾರವೇ ಬೆಳಗಾವಿಯಲ್ಲಿದ್ದ ಸಂದರ್ಭದಲ್ಲಿ ಹೊಸ ವಂಟಮೂರಿಯಲ್ಲಿ ಮಹಿಳೆಯನ್ನು ವಿವವಸ್ತ್ರಗೊಳಿಸಿ ಹಲ್ಲೆ ಮಾಡಲಾಯಿತು. ಆದರೆ, ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದ್ದ ಈ ಪ್ರಕರಣದ ಆರೋಪಿಗಳಿಗೆ ಅದ್ದೂರಿ ಸ್ವಾಗತ ನೀಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲು ಮಾಡಿಕೊಂಡಿದ್ದಲ್ಲದೇ, ಅತೀ ಕಟು ಶಬ್ದಗಳಲ್ಲಿ ಘಟನೆಯನ್ನು ಖಂಡಿಸಿತ್ತು. ಪ್ರಕರಣ ಸಂಬಂಧ 13 ಜನ ಆರೋಪಿಗಳನ್ನು ಬಂಧಿಸಿ ಹಿಂಡಲಗಾ ಕಾರಾಗೃಹದಲ್ಲಿ ಇಡಲಾಗಿತ್ತು. ಎಲ್ಲ ಆರೋಪಿಗಳಿಗೆ ಹೈಕೋಟ್೯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದರಿಂದ ಮಧ್ಯರಾತ್ರಿ ಹೊರಬಂದಿದ್ದಾರೆ.
ಕೇವಲ ನಾಲ್ಕು ತಿಂಗಳ ಅವಧಿಯಲ್ಲೇ ಆರೋಪಿಗಳಿಗೆ ಜಾಮೀನು ಸಿಕ್ಕಿದ್ಧು, ಬೆಳಗಾವಿಯ ಹಿಂಡಲಗಾ ಜೈಲಿನಿಂದ ಹೊರ ಬಂದ ಆರೋಪಿಗಳಿಗೆ ಅದೂ ಕೂಡ ಜೈಲಿನ ಎದುರೇ ಪ್ರಮುಖ ಆರೋಪಿ ಬಸಪ್ಪ ನಾಯ್ಕ್‌ಗೆ ಹೂಮಾಲೆ ಹಾಕಿ ಸಿಹಿ ತಿನ್ನಿಸಿ ಅಪ್ಪಿಕೊಂಡು ಸ್ವಾಗತಿಸಲಾಗಿದೆ.
ಜೈಲಿನ ಎದುರು ನಡೆದ ಸಂಭ್ರಮದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೆಲ ಆರೋಪಿಗಳಿಗಂತೂ ಜೈಲಿನಿಂದ ಹೊರಬರುವ ದೃಶ್ಯಗಳಿಗೆ ಸಿನೆಮಾ ಹಾಡುಗಳನ್ನು ಅಳವಡಿಸಿ ವೈರಲ್ ಮಾಡುತ್ತಿರುವು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.