October 26, 2026
Monday, October 26, 2026
spot_img

ಹನುಮಾನ್‌ ಸಂಘಟನೆಯ ಯಕ್ಷ ವೇಷದ ಹಿಂದೆ ಮಾನವೀಯ ಮುಖ: ಪುಟ್ಟ ನವ್ಯಳ ಚಿಕಿತ್ಸೆಗೆ ಎರಡು ಲಕ್ಷ ರೂಪಾಯಿ ನೆರವು

ಹೊಸದಿಗಂತ ವರದಿ ಉಳ್ಳಾಲ:

ಉಳ್ಳಾಲ ಧರ್ಮನಗರದ ಟೀಮ್‌ ಹನುಮಾನ್ ಸಂಘಟನೆಯ ಯುವಕರು ಕಳೆದ ಐದು ವರುಷದಿಂದ ನಿರಂತರವಾಗಿ ನವರಾತ್ರಿ ಉತ್ಸವಕ್ಕೆ ಯಕ್ಷ ವೇಷ ಧರಿಸಿ, ದಾನಿಗಳಿಂದ ಸಂಗ್ರಹಿಸಿದ ಹಣವನ್ನು ಅಶಕ್ತರಿಗೆ, ಅಗತ್ಯ ಇರುವವರಿಗೆ, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ನೀಡುತ್ತಾ ಬಂದಿದ್ದಾರೆ. ಸಮಾಜದ ಒಳಿತಿಗಾಗಿ ಹಣವನ್ನು ವಿನಿಯೋಗಿಸುವ ತಂಡ ಈ ಬಾರಿ ಎರಡು ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸಿ ಶ್ರವಣ ಸಮಸ್ಯೆಯಿಂದ ಬಳಲುತ್ತಿರುವ ಕುಟುಂಬಕ್ಕೆ ದಾನ ನೀಡಿ ಮಾದರಿಯಾಗಿದ್ದಾರೆ.

ಈ ಬಾರಿ ನವರಾತ್ರಿಯ ಸಂದರ್ಭದಲ್ಲಿ ಭವತೀ ಭಿಕ್ಷಾಂ ದೇಹಿ ಪರಿಕಲ್ಪನೆಯಡಿ ಜನರಿಂದ ಕ್ರೋಢೀಕರಿಸಿದ 2,01,674 ರೂಪಾಯಿಗಳನ್ನು ವಾಕ್ ಮತ್ತು ಶ್ರವಣ ಸಮಸ್ಯೆಯಿಂದ ಬಳಲುತ್ತಿರುವ ಬಂಟ್ವಾಳದ ಪಲ್ಲಮಜಲುವಿನ ಆನಂದ ಪೂಜಾರಿ,ಯಶೋಧ ದಂಪತಿಯ ನಾಲ್ಕು ವರ್ಷದ ಪುತ್ರಿ ನವ್ಯ ಅವರ ಶಸ್ತ್ರ ಚಿಕಿತ್ಸೆಗಾಗಿ ನೀಡಿ ಮಾದರಿ ಕಾರ್ಯ ನಡೆಸಿದ್ದಾರೆ.

ತಂಡ ಸಣ್ಣದು, ಮಾಡುತ್ತಿರುವ ಕಾರ್ಯ ದೊಡ್ಡದು

ಉಳ್ಳಾಲ ಧರ್ಮನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರದಂದು ನಡೆದ ಸರಳ ಕಾರ್ಯಕ್ರಮದಲ್ಲಿ ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಪ್ರಧಾನ ಅರ್ಚಕರಾದ ಮಂಜಪ್ಪ ಕಾರ್ನವರ್ ಅವರು ನವ್ಯ ಅವರ ಕುಟುಂಬಕ್ಕೆ ಸಹಾಯ ಧನದ ಚೆಕ್ಕನ್ನು ಹಸ್ತಾಂತರಿಸಿದರು. ಈ ವೇಳೆ ಮಾತನಾಡಿದ ಮಂಜಪ್ಪ ಕಾರ್ನವರ್ ಅವರು ಯುವಕರನ್ನೇ ಒಳಗೊಂಡಿರುವ ಟೀಮ್ ಹನುಮಾನ್ ಎಂಬ ಸಣ್ಣ ಸಂಘಟನೆಯು ಕಳೆದ ಐದು ವರುಷಗಳಿಂದ ನಿರಂತರವಾಗಿ ನವರಾತ್ರಿ ವೇಳೆ ವೇಷ ಧರಿಸಿ ಗಳಿಸಿದ ಸುಮಾರು ಏಳು ಲಕ್ಷಕ್ಕೂ ಅಧಿಕ ಹಣವನ್ನು ಸಮಾಜದ ಅಶಕ್ತ ವರ್ಗದವರಿಗೆ ನೀಡಿ ದೊಡ್ಡ ಸೇವಾ ಕಾರ್ಯವನ್ನು ನಡೆಸಿರುವುದು ಎಲ್ಲರಿಗೂ ಮಾದರಿಯಾಗಿದೆ.ಎಲ್ಲಾ ಯುವಕರು ಇದೇ ರೀತಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿದಲ್ಲಿ ಸಮಾಜದ ಸರ್ವತೋಮುಖ ಏಳಿಗೆ ಸಾಧ್ಯವೆಂದರು.

ಒಂದು ರೂಪಾಯಿಯೂ ದುರುಪಯೋಗ ಆಗಿಲ್ಲ

ಉಳ್ಳಾಲ ಶಾರದೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀಕಾಂತ್ ಬಂಗೇರ ಅರಸುಹಿತ್ಲು ಮಾತನಾಡಿ ತಾವು ನೀಡಿದ್ದು ಅರ್ಹರಿಗೆ ತಲುಪುತ್ತದೆ ಎಂಬ ಧೃಢ ವಿಶ್ವಾಸದಿಂದ ಜನಸಾಮಾನ್ಯರು ಟೀಮ್ ಹನುಮಾನ್ ಸಂಘಟನೆಯ ವೇಷಧಾರಿಗಳಿಗೆ ಉದಾರ ದೇಣಿಗೆ ನೀಡುತ್ತಿದ್ದಾರೆ. ಅನೇಕ ಕಡೆ ಸಂಘ,ಸಂಸ್ಥೆಗಳ ಹೆಸರಿನಲ್ಲಿ ಚಂದಾ ಕ್ರೋಢೀಕರಿಸಿ ಅದನ್ನ ದುರುಪಯೋಗ ಪಡಿಸಿರುವ ಸಾಕಷ್ಟು ನಿದರ್ಶನಗಳಿವೆ. ಆದರೆ ಟೀಮ್ ಹನುಮಾನ್ ತಂಡವು ಕಳೆದ ಹನ್ನೆರಡು ವರುಷಗಳಿಂದ ಸಮಾಜಮುಖಿ ಕಾರ್ಯಗಳನ್ನ ನಡೆಸಿ ಬೆಳೆದು ಬಂದಿದ್ದು, ಅವರಿಂದ‌ ಸಮಾಜಕ್ಕೆ ಮತ್ತಷ್ಟು ಪ್ರಯೋಜನಗಳು ಲಭಿಸುವಂತಾಗಲಿಯೆಂದು ಆಶಿಸಿದರು.

ನಮ್ಮ ನೆಲದ ಸಂಸ್ಕೃತಿ ಉಳಿಸಿದ ಹನುಮಾನ್‌ ತಂಡ

ಒಂಭತ್ತುಕೆರೆ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಅಧ್ಯಕ್ಷರಾದ ಶರತ್ಚಂದ್ರ ಗಟ್ಟಿ ಸೋಮೇಶ್ವರ ಮಾತನಾಡಿ ಇಂತಹ ಸೇವಾ ಕಾರ್ಯಗಳಿಗೆ ಸಮಾಜವೇ ಬೆನ್ನೆಲುಬಾಗಿ ನಿಲ್ಲಬೇಕು.ಸಮಾಜದ ಪ್ರೋತ್ಸಾಹ ಲಭಿಸದ ಪರಿಣಾಮ ನವರಾತ್ರಿ ಉತ್ಸವದ ವೇಳೆ ಕಾಣ ಸಿಗುತ್ತಿದ್ದ ಅನೇಕ ಸಣ್ಣ,ಪುಟ್ಟ ವೇಷಗಳು ಇಂದು ಮರೆಯಾಗಿವೆ. ಟೀಮ್ ಹನುಮಾನ್ ತಂಡದ ಉತ್ಸಾಹಿ ಯುವಕರು ಯಕ್ಷ ವೇಷ ಧರಿಸುವ ಮೂಲಕ ನಮ್ಮ ನೆಲದ ಸಂಸ್ಕೃತಿಯನ್ನ ಉಳಿಸಿ, ಬೆಳೆಸುವ ಕಾರ್ಯ ನಡೆಸುತ್ತಿದ್ದಾರೆಂದರು.

ಉಳ್ಳಾಲ ಬೈಲು ವೈದ್ಯನಾಥ ಕ್ಷೇತ್ರದ ಪ್ರಧಾನ‌ ಅರ್ಚಕರಾದ ಮುಂಡ ಯಾನೆ ದಾಮೋದರ ಪೂಜಾರಿಯವರು ಕಾರ್ಯಕ್ರಮ ಉದ್ಘಾಟಿಸಿದರು. ಧರ್ಮನಗರದ ಟೀಮ್ ವಜ್ರ ತಂಡದ ಮಕ್ಕಳು ನವರಾತ್ರಿ ವೇಳೆ ವೇಷ ಹಾಕಿ ಕ್ರೋಢೀಕರಿಸಿದ ಹತ್ತು ಸಾವಿರ ರೂಪಾಯಿಗಳನ್ನು ನವ್ಯ ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಧರ್ಮನಗರದ ನಿವಾಸಿ ಅನಾರೋಗ್ಯ ಪೀಡಿತ ಅರವಿಂದ್ ಅವರಿಗೆ ಟೀಮ್ ಹನುಮಾನ್ ವತಿಯಿಂದ ಸಹಾಯ ಧನ ನೀಡಲಾಯಿತು.

Must Read