ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಡಲತಡಿ ಮಂಗಳೂರಿನ ಹವ್ಯಾಸಿ ಗಾಳಿಪಟ ತಂಡ ‘ಟೀಮ್ ಮಂಗಳೂರು’ ಶ್ರೀಲಂಕಾದಲ್ಲಿ ನಡೆದ ಪ್ರತಿಷ್ಠಿತ ‘ಸಿರಾಸಾ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ೨೦೨೬’ರಲ್ಲಿ ಭಾಗವಹಿಸಿ ಭಾರತದ ಪ್ರತಿನಿಧಿಯಾಗಿ ಗಮನ ಸೆಳೆದಿದೆ.

ಶ್ರೀಲಂಕಾದ ಮಾತಾರಾ ಬೀಚ್‌ನಲ್ಲಿ ನಡೆದ ಈ ಉತ್ಸವದಲ್ಲಿ ಮಂಗಳೂರಿನ ತಂಡ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿಶಿಷ್ಟ ಗಾಳಿಪಟಗಳನ್ನು ಹಾರಿಸಿ ಎಲ್ಲರ ಮೆಚ್ಚುಗೆ ಗಳಿಸಿದೆ.

ಶ್ರೀಲಂಕಾದ ಹೆರಿಟೇಜ್ ಕೈಟ್ಸ್ ಸಂಸ್ಥೆಯು ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಇಲಾಖೆಗಳ ಸಹಯೋಗದಲ್ಲಿ ಈ ಉತ್ಸವವನ್ನು ಆಯೋಜಿಸಿತ್ತು. ವಿವಿಧ ದೇಶಗಳ ನಡುವಿನ ಸಾಂಸ್ಕೃತಿಕ ವಿನಿಮಯ, ಸ್ನೇಹ ಮತ್ತು ಬಾಂಧವ್ಯವನ್ನು ಬಲಪಡಿಸುವ ಉದ್ದೇಶದಿಂದ ಪ್ರತಿವರ್ಷ ಈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯುತ್ತದೆ.
ಸಿರಾಸಾ ಅಧಿಕೃತ ಆಹ್ವಾನದ ಮೇರೆಗೆ ಮಂಗಳೂರಿನ ಸರ್ವೇಶ್ ರಾವ್ ನೇತೃತ್ವದ ಹವ್ಯಾಸೀ ಗಾಳಿಪಟ ತಂಡವಾದ ‘ಟೀಮ್ ಮಂಗಳೂರು’ ಪರವಾಗಿ ವಿ.ಕೆ. ಸನಿಲ್, ದಿನೇಶ್ ಹೊಳ್ಳ ಹಾಗೂ ಪ್ರಾಣೇಶ್ ಕುದ್ರೋಳಿ ಉತ್ಸವದಲ್ಲಿ ಭಾಗವಹಿಸಿ ಭಾರತೀಯ ಸಾಂಸ್ಕೃತಿಕ ಚಿತ್ತಾರಗಳನ್ನು ಒಳಗೊಂಡ ಗಾಳಿಪಟಗಳನ್ನು ಬಾನಂಗಳದಲ್ಲಿ ಹಾರಿಸಿದರು. ತಂಡದ ಪ್ರದರ್ಶನಕ್ಕೆ ದೇಶ-ವಿದೇಶದ ಪ್ರವಾಸಿಗರು ಮತ್ತು ಸ್ಥಳೀಯರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಯಿತು.

ದೇಶ, ದೇಶಗಳ ನಡುವೆ ಪರಸ್ಪರ ಸಾಂಸ್ಕೃತಿಕ ವಿನಿಯೋಗ, ಹಂಚಿಕೆ ಮತ್ತು ಸ್ನೇಹ ಒಡನಾಟಗಳ ಹಂಚಿಕೆಯ ದ್ಯೋತಕದೊಂದಿಗೆ ಈ ಗಾಳಿಪಟ ಉತ್ಸವವನ್ನು ಆಯೋಜಿಸಲಾಗಿದೆ. ಸ್ಥಳೀಯರು ಸಾಂಪ್ರದಾಯಿಕ ಶೈಲಿಯ ವಿವಿಧ ವಿನ್ಯಾಸಗಳ ಗಾಳಿಪಟಗಳನ್ನು ನಿರ್ಮಿಸಿ ವಿಭಿನ್ನ ತಂತ್ರಗಳ ಮೂಲಕ ಹಾರಿಸುವುದು ಉತ್ಸವದ ಪ್ರಮುಖ ಆಕರ್ಷಣೆಯಾಗಿತ್ತು.

ಗಮನಾರ್ಹ ಸಂಗತಿಯೆಂದರೆ, ‘ಟೀಮ್ ಮಂಗಳೂರು’ ಈಗಾಗಲೇ ಜಗತ್ತಿನ ೧೨ ರಾಷ್ಟ್ರಗಳಲ್ಲಿ ನಡೆದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಗಳಲ್ಲಿ ಭಾರತೀಯ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಗಾಳಿಪಟಗಳನ್ನು ಹಾರಿಸಿ ದೇಶದ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದಿದೆ. ಶ್ರೀಲಂಕಾದ ಈ ಉತ್ಸವದಲ್ಲಿ ಭಾಗವಹಿಸುವ ಮೂಲಕ ತಂಡ ಮತ್ತೊಮ್ಮೆ ಮಂಗಳೂರು ಮತ್ತು ಭಾರತದ ಹೆಸರನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹೆಮ್ಮೆಯಿಂದ ಪ್ರತಿನಿಧಿಸಿದೆ.



