ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಮೀನುಗಾರರ ದೋಣಿಗೆ ಶ್ರೀಲಂಕಾ ನೌಕಾಪಡೆಯ ಹಡಗು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೀನುಗಾರರು ಗಾಯಗೊಂಡಿದ್ದಾರೆ.
ಗಾಯಗೊಂಡ ಮೀನುಗಾರರನ್ನು ಶಕ್ತಿವೇಲ್, ದೇವರಾಜ್, ಕಾರ್ತಿಕೇಯನ್ ಮತ್ತು ಸತೀಶ್ ಎಂದು ಗುರುತಿಸಲಾಗಿದೆ. ಅವರನ್ನು ನಾಗಪಟ್ಟಣಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಅವರು ಮೀನುಗಾರಿಕೆ ನಡೆಸುತ್ತಿದ್ದಾಗ ದೋಣಿಗೆ ಶ್ರೀಲಂಕಾ ನೌಕಾಪಡೆಯ ನೌಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಅದು ಮಗುಚಿ ಬಿದ್ದಿದೆ ಎಂದು ಗಾಯಗೊಂಡ ಮೀನುಗಾರರು ಪೊಲೀಸರಿಗೆ ತಿಳಿಸಿದ್ದಾರೆ.
ಶ್ರೀಲಂಕಾ ನೌಕಾಪಡೆ ಗಾಯಗೊಂಡ ಮೀನುಗಾರರನ್ನು ಸ್ಥಳಕ್ಕೆ ಆಗಮಿಸಿದ ತಮಿಳುನಾಡಿನ ಇತರ ಮೀನುಗಾರರಿಗೆ ಹಸ್ತಾಂತರಿಸಿದೆ. ಬಳಿಕ ಸಮುದ್ರದ ಮಧ್ಯದಲ್ಲಿ ಮುಳುಗಿದ ದೋಣಿಯನ್ನು ಹೊರತೆಗೆದು ಇತರರ ಸಹಾಯದಿಂದ ಮೀನುಗಾರರನ್ನು ದಡಕ್ಕೆ ಕರೆತರಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.