ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಲಕನ ನಿಯಂತ್ರಣ ತಪ್ಪಿ ಸರಕು ತುಂಬಿದ ಲಾರಿಯೊಂದು ಪಲ್ಟಿಯಾದ ರಭಸಕ್ಕೆ ಎದುರಿನಿಂದ ಬರುತ್ತಿದ್ದ ಕೆ.ಎಸ್ .ಆರ್. ಟಿ.ಸಿ.ಬಸ್ ಗೆ ಡಿಕ್ಕಿ ಹೊಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಗ್ಗ ಸಮೀಪದ ಕಾಡುಬೆಟ್ಟು ಕ್ರಾಸ್ ಬಳಿ ಬುಧವಾರ ಸಂಜೆ ನಡೆದಿದೆ.
ಈ ಅಪಘಾತದಿಂದಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿ ಸೇರಿದಂತೆ ಎಂಟು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಿ.ಸಿ.ರೋಡು – ಕಡೂರು ರಾಜ್ಯ ಹೆದ್ದಾರಿಯ ವಗ್ಗ ಸಮೀಪದ ಕಾರಿಂಜ ಕಾಡಬೆಟ್ಟು ತಿರುವಿನಲ್ಲಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಇದೇ ವೇಳೆ ಮಂಗಳೂರಿನಿಂದ ಬೆಳ್ತಂಗಡಿ ಸಂಚರಿಸುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಗೆ ಡಿಕ್ಕಿಯಾಗಿದೆ. ಘಟನೆಯಿಂದ ಬಸ್ ಚಾಲಕ , ಅದರಲ್ಲಿದ್ದ ಪ್ರಯಾಣಿಕರು ಹಾಗೂ ಲಾರಿ ಚಾಲಕನಿಗೆ ಗಾಯವಾಗಿದೆ.
ಲಾರಿ ಚಾಲಕ ಚಿತ್ರದುರ್ಗದ ಹಿರಿಯೂರಿನ ಮಹೇಶ್ ,ಬಸ್ ಚಾಲಕ ಉಮೇಶ್, ಪ್ರಯಾಣಿಕರಾದ ನಳಿನಿ ಬೆಳ್ತಂಗಡಿ, ವಿದ್ಯಾರ್ಥಿನಿ ಮಧುರಾ ಇರ್ವತ್ತೂರು,ರಕ್ಷಣ್ ವೇಣುಗೋಪಾಲ ಕಾವಳಪಡೂರು, ತಾರಾನಾಥ ಗರ್ಡಾಡಿ ರೋಹಿಣಿ ಮದ್ದಡ್ಕ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಂಟ್ವಾಳ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲಾರಿ ತಿರುವಿನಲ್ಲಿ ಚಾಲಕ ನಿಯಂತ್ರಣ ತಪ್ಪಿ ರಸ್ತೆಗೆ ಪಲ್ಟಿಯಾಗಿ ಬಳಿಕ ತಿರುಗಿ ಎದುರಿನಿಂದ ಬರುತ್ತಿದ್ದ ಬಸ್ ಗೆ ಡಿಕ್ಕಿಯಾಗುವ ದೃಶ್ಯ ಸ್ಥಳೀಯ ಸಿ.ಸಿ.ಕ್ಯಾಮರದಲ್ಲಿ ಸೆರೆಯಾಗಿದ್ದು,ವ್ಯಾಪಕ ವೈರಲ್ ಕೂಡ ಆಗಿದೆ.