ಹೊಸದಿಗಂತ ಮೈಸೂರು:
ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಕಲ್ಲಿದ್ದಲು ತುಂಬಿದ ಲಾರಿಯೊಂದು ನಡು ರಸ್ತೆಯಲ್ಲಿ ಹೊತ್ತಿ ಧಗ, ಧಗನೆ ಉರಿದ ಘಟನೆ ಸೋಮವಾರ ಮೈಸೂರು ಹುಣಸೂರು ರಸ್ತೆಯ ಹೂಟಗಳ್ಳಿಯ ಬಡಾವಣೆಯಲ್ಲಿ ನಡೆದಿದೆ.
ಇಂದು ಮಧ್ಯಾಹ್ನ 1ಗಂಟೆ ಸಮಯದಲ್ಲಿ 18 ಚಕ್ರದ ಬೃಹತ್ ಲಾರಿ ತಮಿಳುನಾಡಿನಿಂದ ಕೊಡಗು ಜಿಲ್ಲೆಯ ಕುಶಾಲನಗರಕ್ಕೆ ಕಲ್ಲಿದ್ದಲು ತುಂಬಿಕೊಂಡು ಹೋಗುತ್ತಿತ್ತು. ಈ ವೇಳೆ ಲಾರಿಯಲ್ಲಿ ಏಕಾಏಕಿ ತಾಂತ್ರಿಕ ದೋಷದಿಂದ ದಿಢೀರನೆ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಚಾಲಕ ಅಂತೋಣಿ ಲಾರಿಯನ್ನು ನಡುರಸ್ತೆಯಲ್ಲೇ ನಿಲ್ಲಿಸಿ ಕೆಳಗೆ ಇಳಿದಿದ್ದಾರೆ.
ಅಷ್ಟೊತ್ತಿಗಾಗಲೇ ಸಾರ್ವಜನಿಕರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರು. ತಕ್ಷಣ ಆಗಮಿಸಿದ ಅಗ್ನಿ ಶಾಮಕ ದಳದವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಲಾರಿ ಸಂಪೂರ್ಣ ಸುಟ್ಟು ನಾಶವಾಗುವುದು ತಪ್ಪಿದೆ. ವಿಜಯನಗರ ಪೊಲೀಸರು ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.