September 3, 2026
Thursday, September 3, 2026
spot_img

ಕೋಳಿ ಕಸ ತೆಗೆದುಕೊಂಡು ಹೋಗಲು ಫೀಸ್‌ ಬೇಡ ಎಂದು ಪ್ರೊಟೆಸ್ಟ್‌ : ಬೆಂಗಳೂರಿನಲ್ಲಿ ಇಂದು, ನಾಳೆ ಚಿಕನ್‌ ಅಂಗಡಿಗಳು ಬಂದ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿನಲ್ಲಿ ಇಂದು ಹಾಗೂ ನಾಳೆ ಚಿಕನ್‌ ಅಂಗಡಿಗಳು ಬಂದ್‌ ಆಗಿರಲಿದೆ. ಹೌದು, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಚಿಕನ್‌ ಅಂಗಡಿಗಳ ತ್ಯಾಜ್ಯ ವಿಲೇವಾರಿಗೆ ಪ್ರತೀ ಕೆಜಿಗೆ ಐದು ರೂಪಾಯಿಯಂತೆ ಶುಲ್ಕ ನಿಗದಿ ಮಾಡಿದೆ. ಇದನ್ನು ವಿರೋಧಿಸಿ ಪೌಲ್ಟ್ರಿ ಟ್ರೇಡರ್ಸ್‌ ಅಸೋಸಿಯೇಷನ್‌ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಯುತ್ತಿದೆ.

ಎಷ್ಟು ಶುಲ್ಕ? ಎಷ್ಟು ಕಸ?

ಬೆಂಗಳೂರಿನಲ್ಲಿ ನಿತ್ಯವೂ ಸುಮಾರು ಏಳು ಲಕ್ಷ ಕೆಜಿಯಷ್ಟು ಚಿಕನ್‌ ಮಾರಾಟವಾಗುತ್ತಿದೆ. ಇದರಿಂದಾಗಿ ಒಟ್ಟಾರೆ ಎರಡರಿಂದ ಮೂರು ಲಕ್ಷ ಕೆಜಿ ಕಸ ಉತ್ಪತ್ತಿಯಾಗುತ್ತಿದೆ. ಒಂದು ಅಂಗಡಿಯಿಂದ 30 ಕೆಜಿ ಕಸ ಉತ್ಪತ್ತಿಯಾಗುವ ಸಾಧ್ಯತೆ ಇದೆ. ಕೆಜಿಗೆ ಐದು ರೂಪಾಯಿ ಎಂದರೂ ಒಂದು ಅಂಗಡಿಗೆ ದಿನಕ್ಕೆ 150 ರೂಪಾಯಿ ಹಣ ನೀಡಬೇಕಾಗುತ್ತದೆ. ತಿಂಗಳಿಗೆ 4,500 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಬರುವ ಲಾಭದಲ್ಲಿ ಕಸಕ್ಕೆ ಇಷ್ಟೊಂದು ಪಾವತಿ ಮಾಡಿದರೆ ನಾವು ಜೀವನ ನಡೆಸುವುದು ಹೇಗೆ ಎಂದು ಅಂಗಡಿ ವ್ಯಾಪಾರಿಗಳು ಗರಂ ಆಗಿದ್ದಾರೆ.

ಎಂಟು ಸಾವಿರ ಚಿಕನ್‌ ಅಂಗಡಿಗಳು

ಬೆಂಗಳೂರಿನಲ್ಲಿ ಏನಿಲ್ಲಾ ಎಂದರೂ ಏಳರಿಂದ ಎಂಟು ಸಾವಿರ ಚಿಕನ್‌ ಅಂಗಡಿಗಳಿವೆ. ಇವೆಲ್ಲ ಅಂಗಡಿಗಳೂ ಕಸ ತೆಗೆದುಕೊಂಡು ಹೋಗಲು ಶುಲ್ಕ ವಿಧಿಸಿರುವುದನ್ನು ವಿರೋಧಿಸಿವೆ. ಈ ಶುಲ್ಕವನ್ನು ಹಿಂದಕ್ಕೆ ತೆಗೆಯಬೇಕು ಇಲ್ಲವಾದರೆ ಅಂಗಡಿಗಳನ್ನು ಬಂದ್‌ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ದೊಡ್ಡ ದೊಡ್ಡ ಅಂಗಡಿಗಳು ಈ ಹಣ ನೀಡೋದಕ್ಕೆ ಹಿಂದೆ ಸರಿಯದೇ ಇರಬಹುದು. ಆದರೆ ಚಿಕ್ಕ ಚಿಕ್ಕ ಅಂಗಡಿಗಳಿಗೆ ಸಮಸ್ಯೆ ಆಗಲಿದೆ ಈ ಕೂಡಲೇ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !