ಹೊಸದಿಗಂತ ವರದಿ , ಚಿತ್ರದುರ್ಗ:
ಇಲ್ಲಿನ ಐತಿಹಾಸಿಕ ಕೋಟೆ ವೀಕ್ಷಣೆಗೆ ಬಂದಿದ್ದ ಪ್ರವಾಸಿಯೊಬ್ಬರು ಒನಕೆ ಓಬವ್ವನ ಕಿಂಡಿಯಲ್ಲಿ ನುಸುಳುತ್ತಿದ್ದ ಸಂದರ್ಭದಲ್ಲಿ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದ ಘಟನೆ ಬೆಳಕಿಗೆ ಬಂದಿದೆ. ಜೊತೆಗಿದ್ದ ಸ್ನೇಹಿತರು ಕೂಡಲೇ ಅವರನ್ನು ಅಲ್ಲಿಂದ ಹೊರಗೆ ಹೊತ್ತು ತಂದು ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ್ದಾರೆ.
ಕೋಟೆಯಲ್ಲಿ ಒನಕೆ ಓಬವ್ವನ ಕಿಂಡಿ ಬಳಿ ಹೋದ ಪ್ರವಾಸಿಗರು ಓಬವ್ವ ಹೈದರಾಲಿಯ ಸೈನಿಕರನ್ನು ಸದೆಬಡಿದ ದೃಶ್ಯವನ್ನು ಅನುಕರಣೆ ಮಾಡಲು ಮುಂದಾಗುತ್ತಾರೆ. ಕಿರಿದಾದ ಕಿಂಡಿಯಲ್ಲಿ ನುಸುಳುವ ಸಾಹಸ ದೃಶ್ಯವನ್ನು ಪೋಟೋ ತೆಗೆಸಿಕೊಂಡು ಖುಷಿಪಡುತ್ತಾರೆ.
ಅದರಂತೆ ಬೆಂಗಳೂರಿನಿಂದ ಬಂದಿದ್ದ ಪ್ರವಾಸಿಯೊಬ್ಬರು ಒನಕೆ ಓಬವ್ವನ ಕಿಂಡಿಯಲ್ಲಿ ನುಸುಯುತ್ತಿದ್ದರು. ಕಿಂಡಿಯ ಒಳಗಿರುವ ಹೆಬ್ಬಂಡೆಗಳು ಹಾಗೂ ನುಸುಳಲು ಇರುವ ಅತ್ಯಂತ ಕಿರಿದಾದ ಜಾಗ ನೋಡಿ ಕೊಂಚ ಗಾಬರಿಗೊಂಡಿದ್ದಾರೆ. ಇದೇ ವೇಳೆ ಎದೆನೋವು ಕಾಣಿಸಿಕೊಂಡು ಅಲ್ಲೇ ಕುಸಿದು ಬಿದ್ದಿದ್ದಾರೆ. ಇದನ್ನು ಗಮಿಸಿದ ಆತನ ಪತ್ನಿ ಮತ್ತು ಮಕ್ಕಳು ಆತಂಕದಿಂದ ಕೂಗಿಕೊಂಡಿದ್ದಾರೆ. ಅಲ್ಲೇ ಇದ್ದ ಇತರೆ ಪ್ರವಾಸಿಗರನ್ನು ಕೂಗಿ ಪತಿಯನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ರವಿಕುಮಾರ್, ಮಾರುತಿ, ಮಲ್ಲಿಕಾರ್ಜುನ್ ಮತ್ತಿತರರು ನೆರವಿಗೆ ಬಂದಿದ್ದಾರೆ. ಎದೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಅಲ್ಲಿಂದ ಸ್ಟ್ರೆಚ್ಚರ್ ಸಹಾಯದಿಂದ ಕೋಟೆಯ ಪ್ರವೇಶ ದ್ವಾರಕ್ಕೆ ಹೊತ್ತು ತಂದು ಸಕಾಲಕ್ಕೆ ಆಸ್ಪತ್ರೆಗೆ ಸೇರಿಸಿ, ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆಯ ನಂತರ ಚೇತರಿಸಿಕೊಂಡ ವ್ಯಕ್ತಿಯನ್ನು ಕುಟುಂಬದವರು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.
ಎದೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಕೋಟೆಯೊಳಗಿನ ಕಡಿದಾದ ದಾರಿಯಲ್ಲೂ ಹೊತ್ತು ತಂದು ಸಕಾಲದಲ್ಲಿ ಆಸ್ಪತ್ರೆ ಸೇರಿಸಿದ ಪ್ರವಾಸಿ ಮಿತ್ರರ ಸಮಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.